ಫ್ಲೋರಿಡಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐಷಾರಾಮಿ ಮಾರ್-ಎ-ಲಾಗೋ (Mar-a-Lago) ರೆಸಾರ್ಟ್ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲಾ 9 ಮಂದಿ ಮೃತಪಟ್ಟಿದ್ದಾರೆ. ನುವಾರ ಮಧ್ಯಾಹ್ನ ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯಲ್ಲಿ ಈ ಘಟನೆ ನಡೆದಿದೆ.
ಟ್ರಂಪ್ ರೆಸಾರ್ಟ್ನಿಂದ ಕೇವಲ 11 ಕಿ.ಮೀ ದೂರದಲ್ಲಿ ದುರಂತ
ಟೆಕ್ಸಾಸ್ನ ಆಸ್ಟಿನ್-ಬರ್ಗ್ಸ್ಟ್ರೋಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಹಾಮಾಸ್ಗೆ ತೆರಳುತ್ತಿದ್ದ ‘ಲಿಯರ್ಜೆಟ್ 60′ (Learjet 60) ಖಾಸಗಿ ವಿಮಾನ ಈ ದುರಂತಕ್ಕೆ ಸಿಲುಕಿದೆ. ಭಾನುವಾರ ಮಧ್ಯಾಹ್ನ ಸುಮಾರು 12.50ರ ವೇಳೆಗೆ ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯ ಗ್ರೀನ್ಏಕರ್ಸ್ ಸಮೀಪ ವಿಮಾನ ಪತನಗೊಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋ ರೆಸಾರ್ಟ್ನಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿರುವ ಕ್ರೆಸ್ಟ್ಹ್ಯಾವನ್ ವಸತಿ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಕಾಶದಲ್ಲಿ ಹಾರುತ್ತಿದ್ದ ವಿಮಾನ ಏಕಾಏಕಿ ನಿಯಂತ್ರಣ ಕಳೆದುಕೊಂಡು ಕೆಳಮುಖವಾಗಿ ಧಾವಿಸಿ ರಸ್ತೆಯ ಪಕ್ಕದಲ್ಲೇ ಅಪ್ಪಳಿಸಿದೆ. ವಿಮಾನ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಭಾರೀ ಸ್ಫೋಟ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿ ದೊಡ್ಡ ಕಂದಕವೂ ನಿರ್ಮಾಣವಾಗಿದೆ ಎನ್ನಲಾಗಿದೆ.
ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾದ ಖಾಸಗಿ ಜೆಟ್!
ವಿಮಾನ ಪತನಗೊಂಡ ಬಳಿಕ ಸಂಭವಿಸಿದ ಸ್ಫೋಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಮಾನ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಭಾರೀ ಪ್ರಮಾಣದಲ್ಲಿ ಬೆಂಕಿ ಮತ್ತು ಹೊಗೆ ಆವರಿಸಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.
ಅಮೆರಿಕದ ಸಾರಿಗೆ ಕಾರ್ಯದರ್ಶಿ ಶಾನ್ ಡಫಿ ಈ ಘಟನೆಯನ್ನು ಅತ್ಯಂತ ಭೀಕರ ದುರಂತ ಎಂದು ಬಣ್ಣಿಸಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ 9 ಪ್ರಯಾಣಿಕರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಆದರೆ ಈ ಅಪಘಾತದಲ್ಲಿ ನೆಲದ ಮೇಲಿದ್ದ ಸಾರ್ವಜನಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ತಿಳಿಸಿದ್ದಾರೆ. ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅವರು, ವಿಮಾನವು ಅತ್ಯಂತ ವೇಗವಾಗಿ ಕೆಳಕ್ಕೆ ಧಾವಿಸಿ ರಸ್ತೆಯ ಪಕ್ಕದಲ್ಲಿ ಅಪ್ಪಳಿಸಿದೆ ಎಂದು ವಿವರಿಸಿದ್ದಾರೆ.
35 ಸಾವಿರ ಅಡಿ ಎತ್ತರದಿಂದ ಏಕಾಏಕಿ ಪತನ!
ಪ್ರಾಥಮಿಕ ಫ್ಲೈಟ್ ಟ್ರ್ಯಾಕಿಂಗ್ ಮಾಹಿತಿ ಹಾಗೂ ಏರ್ ಟ್ರಾಫಿಕ್ ಕಂಟ್ರೋಲ್ (ATC) ಸಂಭಾಷಣೆಯ ಪ್ರಕಾರ, ವಿಮಾನವು ಸುಮಾರು 35,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಎದುರಿಸಿತ್ತು.
ಆ ಪ್ರದೇಶದಲ್ಲಿ ಮಳೆ ಹಾಗೂ ಪ್ರಕ್ಷುಬ್ಧ ವಾತಾವರಣವಿದ್ದ ಹಿನ್ನೆಲೆ ಪೈಲಟ್ಗಳು ವಿಮಾನದ ಎತ್ತರವನ್ನು ಹೆಚ್ಚಿಸಲು ಅನುಮತಿ ಕೋರಿದ್ದರು ಎನ್ನಲಾಗಿದೆ. ಆದರೆ ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ವಿಮಾನವು ಅತಿವೇಗವಾಗಿ ಕೆಳಮುಖವಾಗಿ ಧಾವಿಸಲು ಆರಂಭಿಸಿತ್ತು. ವರದಿಗಳ ಪ್ರಕಾರ, ನಿಮಿಷಕ್ಕೆ ಸುಮಾರು 10,000 ಅಡಿ ವೇಗದಲ್ಲಿ ಆರಂಭವಾದ ಪತನದ ವೇಗ ನಂತರ 20,000 ಅಡಿ ಹಾಗೂ 30,000 ಅಡಿಗಳವರೆಗೆ ತಲುಪಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪೈಲಟ್ಗಳು ಏರ್ ಟ್ರಾಫಿಕ್ ಕಂಟ್ರೋಲ್ಗೆ ತುರ್ತು ಸಂದೇಶ ರವಾನಿಸಿದ್ದರು. “ಮೇಡೇ, ಮೇಡೇ… ನಾವು ನಿಮಿಷಕ್ಕೆ 20,000 ಅಡಿ ವೇಗದಲ್ಲಿ ಕೆಳಗೆ ಬೀಳುತ್ತಿದ್ದೇವೆ. ನೆಲಕ್ಕೆ ಅಪ್ಪಳಿಸಲಿದ್ದೇವೆ” ಎಂಬ ಆತಂಕಕಾರಿ ಸಂದೇಶ ಕೊನೆಯ ಬಾರಿಗೆ ದಾಖಲಾಗಿದೆ.
ಇದಾದ ಕೆಲವೇ ಕ್ಷಣಗಳಲ್ಲಿ ವಿಮಾನ ತೀವ್ರವಾಗಿ ಬಲಕ್ಕೆ ತಿರುಗಿ ನೆಲಕ್ಕೆ ಅಪ್ಪಳಿಸಿದೆ. ಪೈಲಟ್ಗಳ ಕೊನೆಯ ಕ್ಷಣಗಳ ಸಂಭಾಷಣೆ ದುರಂತದ ತೀವ್ರತೆಯನ್ನು ಬಯಲು ಮಾಡಿದೆ.
ಮುನ್ನೆಚ್ಚರಿಕೆ ಕ್ರಮವಾಗಿ 600 ಜನರ ಸ್ಥಳಾಂತರ
ವಿಮಾನ ಪತನಗೊಂಡ ಪ್ರದೇಶದ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣ ಆರಂಭಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಸಮೀಪದ ಮೊಬೈಲ್ ಹೋಮ್ ವಸತಿ ಸಮುದಾಯದಲ್ಲಿದ್ದ ಸುಮಾರು 600 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಅಪಘಾತದ ವೇಳೆ ಆ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರತಿಕೂಲ ಹವಾಮಾನವೇ ವಿಮಾನ ಪತನಕ್ಕೆ ಕಾರಣವಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ತನಿಖೆ ಪೂರ್ಣಗೊಳ್ಳುವವರೆಗೆ ಅಪಘಾತದ ನಿಖರ ಕಾರಣವನ್ನು ಖಚಿತಪಡಿಸಲು ಸಾಧ್ಯವಿಲ್ಲ.
