ಅಮೆರಿಕಾ, ಇರಾನ್ ಮಧ್ಯೆ ಮತ್ತೆ ಶುರುವಾಗುತ್ತಾ ಯುದ್ಧ: ಸೇನೆಗೆ ರೆಡಿ ಇರುವಂತೆ ಆದೇಶ ನೀಡಿದ ಇರಾನ್

Untitled Design 2026 11 01T103512.441

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಶಸ್ತ್ರ ಸಂಘರ್ಷ ಆರಂಭವಾಗಿ ಸುಮಾರು ಒಂದು ವರ್ಷ ಕಳೆಯುತ್ತಿದ್ದರೂ, ಯುದ್ಧ ಶಮನಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಉಭಯ ದೇಶಗಳ ನಡುವಿನ ಈ ಬದ್ಧವೈರತ್ವವು ಈಗ ಮುಂದಿನ ಭೀಕರ ಘಟ್ಟ ತಲುಪಲಿದೆಯೇ ಎನ್ನುವ ಬಲವಾದ ಅನುಮಾನ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗುತ್ತಿದೆ.

ಉನ್ನತ ಮಟ್ಟದ ಸೇನಾ ಸಭೆ ನಡೆಸಿದ ಮೊಜ್ತಾಬಾ ಖಮೇನಿ

ನಂಬಲರ್ಹ ಮೂಲಗಳ ಪ್ರಕಾರ, ಇರಾನ್ನ ಅತ್ಯುನ್ನತ ನಾಯಕ ಅಯತೊಲ್ಲಾ ಮೊಜ್ತಾಬಾ ಖಮೇನಿ ಅವರು ತಮ್ಮ ದೇಶದ ಹಿರಿಯ ಮಿಲಿಟರಿ ಅಧಿಕಾರಿಗಳೊಂದಿಗೆ ಮಹತ್ವದ ತುರ್ತು ಸಭೆ ನಡೆಸಿದ್ದಾರೆ. “ಅಮೆರಿಕ ಯಾವುದೇ ಕ್ಷಣದಲ್ಲಾದರೂ ನಮ್ಮ ಮೇಲೆ ದಿಢೀರ್ ದಾಳಿ ನಡೆಸುವ ಸಾಧ್ಯತೆಯಿದೆ, ಹೀಗಾಗಿ ಸೇನೆಯು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗಿರಬೇಕು” ಎಂದು ಖಮೇನಿ ಅವರು ಸೇನಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಮತ್ತು ಆದೇಶ ನೀಡಿದ್ದಾರೆ ಎನ್ನಲಾಗಿದೆ.

‘ಫಾದರ್ ಆಫ್ ಆಲ್ ಬಾಂಬ್’ ಪ್ರತ್ಯುತ್ತರದ ಬೆದರಿಕೆ

ಅಮೆರಿಕದ ನಿರಂತರ ವೈಮಾನಿಕ ಹಾಗೂ ಕ್ಷಿಪಣಿ ದಾಳಿಗಳಿಂದ ಕಂಗೆಟ್ಟಿರುವ ಇರಾನ್, ಈ ಬಾರಿ ಅಮೆರಿಕಗೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗಿದೆ. ಈ ಹಿಂದೆ ದಾಳಿಯ ಸಂದರ್ಭದಲ್ಲಿ ಇರಾನ್, ಅಮೆರಿಕದ ವಿರುದ್ಧ ಅತ್ಯಂತ ವಿನಾಶಕಾರಿ ‘ಫಾದರ್ ಆಫ್ ಆಲ್ ಬಾಂಬ್’ ಅಸ್ತ್ರವನ್ನು ಪ್ರಯೋಗಿಸುವುದಾಗಿ ಎಚ್ಚರಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ತನ್ನ ಬೃಹತ್ ‘ಮದರ್ ಆಫ್ ಆಲ್ ಬಾಂಬ್’ ಬಳಕೆಯ ಸುಳಿವು ನೀಡಿತ್ತು. ಇದೀಗ ಇರಾನ್ ತನ್ನ ಹೇಳಿಕೆಯನ್ನು ಕೃತಿಯಲ್ಲಿ ಇಳಿಸಲು ಮುಂದಾಗಿದ್ದು, ಬೃಹತ್ ಮಟ್ಟದ ಪ್ರತಿದಾಳಿಗೆ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.

ಮುಗಿಯದ ಸಂಘರ್ಷ-ಜಗತ್ತಿಗೆ ಆತಂಕ

ಒಟ್ಟಿನಲ್ಲಿ, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಕ್ಷಣಕ್ಕೆ ಕೊನೆಗೊಳ್ಳುವ ಮುನ್ಸೂಚನೆಗಳಿಲ್ಲ. ಈ ಸೈನಿಕ ಸಂಘರ್ಷ ಮುಂದೆ ಎಲ್ಲಿಗೆ ಹೋಗಿ ತಲುಪಲಿದೆ ಹಾಗೂ ಮಧ್ಯಪ್ರಾಚ್ಯದಲ್ಲಿ ಎಷ್ಟರಮಟ್ಟಿಗೆ ವಿನಾಶ ಸೃಷ್ಟಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Exit mobile version