ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧವು ಶೀಘ್ರದಲ್ಲೇ ಮುಕ್ತಾಯಗೊಲ್ಳುವ ಸಾಧ್ಯತೆ ಎದ್ದು ಕಾಣುತ್ತಿದೆ. ಇದಕ್ಕೆ ಕಾರಣವೆಂಬಂತೆ, ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಮಿಲಿಟರಿ ದಾಳಿಗಳನ್ನು ನಡೆಸಲು ಮುಂದಾಗಿದ್ದ ಅಮೆರಿಕಾ, ಮುಂದಿನ ಐದು ದಿನಗಳವರೆಗೆ ಸ್ಥಗಿತಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಕ್ಷಣಾ ಇಲಾಖೆಗೆ (Pentagon) ಮಹತ್ವದ ಆದೇಶ ನೀಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಟ್ರಂಪ್, ಅಮೆರಿಕ ಮತ್ತು ಇರಾನ್ ನಡುವೆ ಕಳೆದ ಎರಡು ದಿನಗಳಿಂದ ಅತ್ಯಂತ ಉತ್ತಮ ಮತ್ತು ಉತ್ಪಾದಕ ಸಂಭಾಷಣೆಗಳು ನಡೆದಿವೆ. ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಸಂಪೂರ್ಣ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಚರ್ಚೆಗಳು ಪೂರಕವಾಗಿವೆ. ಈ ಸಕಾರಾತ್ಮಕ ಬೆಳವಣಿಗೆಯ ಹಿನ್ನೆಲೆಯಲ್ಲಿ, ನಡೆಯುತ್ತಿರುವ ಮಾತುಕತೆಗಳ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ಐದು ದಿನಗಳ ಕಾಲ ಮಿಲಿಟರಿ ಕಾರ್ಯಾಚರಣೆಯನ್ನು ಮುಂದೂಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಟ್ರಂಪ್ ಅವರ ಈ ನಿರ್ಧಾರವು ಕೇವಲ ತಾತ್ಕಾಲಿಕ ಶಾಂತಿಯ ಸಂಕೇತವಲ್ಲ, ಬದಲಿಗೆ ಇದರಲ್ಲಿ ಒಂದು ಗಂಭೀರ ಎಚ್ಚರಿಕೆಯೂ ಅಡಗಿದೆ. ಈ ಐದು ದಿನಗಳ ವಿರಾಮವು ಕೇವಲ ಮಾತುಕತೆಯ ಪ್ರಗತಿಯ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಟೆಹ್ರಾನ್ ಮಾತುಕತೆಯಲ್ಲಿ ಸಹಕರಿಸದಿದ್ದರೆ ಅಥವಾ ರಚನಾತ್ಮಕವಾಗಿ ಸ್ಪಂದಿಸದಿದ್ದರೆ, ಈ ವಿರಾಮವು ತಕ್ಷಣವೇ ಕೊನೆಗೊಂಡು ದಾಳಿಗಳು ಪುನರಾರಂಭಗೊಳ್ಳಲಿವೆ ಎಂದು ಅಮೆರಿಕದ ಮೂಲಗಳು ಸೂಚಿಸಿವೆ.
ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಜಾಗತಿಕವಾಗಿ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ಭಾರಿ ಹೊಡೆತ ಬಿದ್ದಿದೆ. ವಿಶೇಷವಾಗಿ ಭಾರತದಂತಹ ದೇಶಗಳು ಇಂಧನ ಬಿಕ್ಕಟ್ಟಿನ ಭೀತಿಯಲ್ಲಿದ್ದವು. ಈಗ ಟ್ರಂಪ್ ನೀಡಿರುವ ಈ ಐದು ದಿನಗಳ ಕಾಲಾವಕಾಶವು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯನ್ನು ತಡೆಹಿಡಿಯಲು ಮತ್ತು ರಾಜತಾಂತ್ರಿಕ ಹಾದಿಯನ್ನು ಸುಗಮಗೊಳಿಸಲು ನೆರವಾಗುವ ನಿರೀಕ್ಷೆಯಿದೆ.
ಟ್ರಂಪ್ ಅವರು ಉತ್ಪಾದಕ ಸಂಭಾಷಣೆ ಎಂದು ಹೇಳಿದೆ, ಆದರೆ ಇರಾನ್ ಸರ್ಕಾರವು ಯಾವುದೇ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದ ಬಗ್ಗೆ ಇದುವರೆಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.





