ನವದೆಹಲಿ/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಭಾರತದಿಂದ ಆಮದು ಆಗುವ ಸೋಲಾರ್ ಉತ್ಪನ್ನಗಳ ಮೇಲೆ ಶೇ.126ರಷ್ಟು ಭಾರೀ ತೆರಿಗೆ ವಿಧಿಸುವುದಾಗಿ ಘೋಷಿಸಿದೆ. ಇತ್ತೀಚೆಗೆ ಭಾರತ ಮೂಲದ ಕೆಲವು ವಸ್ತುಗಳ ಮೇಲಿನ ಸುಂಕವನ್ನು ಶೇ.10ಕ್ಕೆ ಇಳಿಸಲಾಗಿತ್ತು. ಆದರೆ ಇದೀಗ ಸೌರಫಲಕ (Solar Panels) ಮತ್ತು ಸೋಲಾರ್ ಸೆಲ್‌ಗಳ ಮೇಲೆ ಅಚ್ಚರಿಯ ಕ್ರಮ ಕೈಗೊಂಡಿರುವುದು ಭಾರತೀಯ ರಫ್ತುದಾರರಿಗೆ ದೊಡ್ಡ ಆಘಾತ ತಂದಿದೆ.
ಅಮೆರಿಕ ಸರ್ಕಾರದ ಆರೋಪದ ಪ್ರಕಾರ, ಭಾರತ ಸರ್ಕಾರವು ಸೋಲಾರ್ ಉತ್ಪಾದಕರಿಗೆ ಹೆಚ್ಚಿನ ಸಬ್ಸೀಡಿ ನೀಡುತ್ತಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡಿ ಅಮೆರಿಕ ಮಾರುಕಟ್ಟೆಗೆ ಸುರಿಯಲಾಗುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆ ಅಮೆರಿಕದ ವಾಣಿಜ್ಯ ಮತ್ತು ಆರ್ಥಿಕ ಇಲಾಖೆಗಳು ತನಿಖೆ ನಡೆಸಿ, ಭಾರೀ ಸುಂಕ ವಿಧಿಸುವ ನಿರ್ಧಾರ ಕೈಗೊಂಡಿವೆ.
ಅಧಿಕೃತ ಆದೇಶದ ಪ್ರಕಾರ, 2022ರಲ್ಲಿ ಭಾರತದಿಂದ ಸುಮಾರು ₹762 ಕೋಟಿ ಮೌಲ್ಯದ ಸೋಲಾರ್ ಉಪಕರಣಗಳನ್ನು ಅಮೆರಿಕ ಆಮದು ಮಾಡಿಕೊಂಡಿತ್ತು. 2024ರ ವೇಳೆಗೆ ಇದು ₹7,200 ಕೋಟಿ ಮಟ್ಟಕ್ಕೆ ಏರಿಕೆಯಾಗಿದೆ. ಈ ಗಣನೀಯ ಏರಿಕೆ ಅಮೆರಿಕದ ಸ್ಥಳೀಯ ಉತ್ಪಾದಕರ ಮೇಲೆ ಒತ್ತಡ ತಂದಿದೆ ಎಂಬುದು ಅಲ್ಲಿನ ಆಡಳಿತದ ವಾದ.
ಭಾರತ ಮಾತ್ರವಲ್ಲದೆ ಇಂಡೋನೇಷ್ಯಾ ಮತ್ತು ಲಾವೋಸ್ ದೇಶಗಳ ಮೇಲೂ ಅಮೆರಿಕ ಕಠಿಣ ನಿಲುವು ತಾಳಿದೆ. ಇಂಡೋನೇಷ್ಯಾ ಮೇಲೆ ಶೇ.86ರಿಂದ ಶೇ.143ರವರೆಗೆ ಹಾಗೂ ಲಾವೋಸ್ ಮೇಲೆ ಶೇ.81ರಷ್ಟು ಸುಂಕ ವಿಧಿಸಲಾಗಿದೆ. 2025ರ ಆರಂಭದಲ್ಲಿ ಈ ಮೂರು ದೇಶಗಳು ಸೇರಿ ಅಮೆರಿಕದ ಒಟ್ಟು ಸೋಲಾರ್ ಆಮದುಗಳಲ್ಲಿ ಶೇ.57ರಷ್ಟು ಪಾಲು ಹೊಂದಿದ್ದವು ಎನ್ನಲಾಗಿದೆ.
ಭಾರತದ ಮೇಲೆ ಪರಿಣಾಮ?
ಈ ಹೊಸ ಸುಂಕದಿಂದ ಭಾರತೀಯ ಸೋಲಾರ್ ಉತ್ಪಾದಕರಿಗೆ ಅಮೆರಿಕ ಮಾರುಕಟ್ಟೆ ಸವಾಲಿನಾಗಿದೆ. ರಫ್ತು ವೆಚ್ಚ ಹೆಚ್ಚಳದಿಂದ ಸ್ಪರ್ಧಾತ್ಮಕತೆ ಕುಸಿಯುವ ಸಾಧ್ಯತೆ ಇದೆ. ವಿಶೇಷವಾಗಿ ಗುಜರಾತ್, ತಮಿಳುನಾಡು ಮತ್ತು ಕರ್ನಾಟಕದಲ್ಲಿರುವ ಸೋಲಾರ್ ಉತ್ಪಾದನಾ ಘಟಕಗಳಿಗೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ತಜ್ಞರ ಪ್ರಕಾರ, ಭಾರತ ಸರ್ಕಾರವು ಈ ವಿಚಾರವನ್ನು ವಿಶ್ವ ವ್ಯಾಪಾರ ಸಂಸ್ಥೆ (WTO) ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ.
‘ಆದಾಯ ತೆರಿಗೆ ಬೇಡ’ – ಟ್ರಂಪ್ ಹೊಸ ಘೋಷಣೆ
ಇದೇ ವೇಳೆ ಸಂಸತ್ತಿನಲ್ಲಿ ಮಾತನಾಡಿದ ಟ್ರಂಪ್, ಆಮದು ಸುಂಕಗಳಿಂದ ಕೋಟ್ಯಂತರ ಡಾಲರ್ ಆದಾಯ ಬರುತ್ತಿದೆ ಎಂದು ಹೇಳಿದರು. “ಇಷ್ಟು ವರ್ಷ ನಮ್ಮನ್ನು ಸುಲಿಗೆ ಮಾಡಿದ ದೇಶಗಳೇ ಈಗ ನಮಗೆ ಹಣ ಪಾವತಿಸುತ್ತಿವೆ. ಇದರಿಂದ ಅಮೆರಿಕ ಆರ್ಥಿಕವಾಗಿ ಬಲವಾಗುತ್ತಿದೆ. ಭವಿಷ್ಯದಲ್ಲಿ ಅಮೆರಿಕನ್ನರು ಆದಾಯ ತೆರಿಗೆ ಕಟ್ಟುವ ಅಗತ್ಯವೇ ಇರುವುದಿಲ್ಲ” ಎಂದು ಅವರು ಘೋಷಿಸಿದರು.
ಹಿಂದೆಯೂ ಹಲವು ಬಾರಿ ಟ್ರಂಪ್ ಆದಾಯ ತೆರಿಗೆ ರದ್ದತಿ ಬಗ್ಗೆ ಮಾತನಾಡಿದ್ದರು. ಆದರೆ ಈ ಬಾರಿ ಸುಂಕದ ಆದಾಯವನ್ನು ನೇರವಾಗಿ ಜನರಿಗೆ ಲಾಭವಾಗುವಂತೆ ಬಳಸುವ ಸೂಚನೆ ನೀಡಿದ್ದಾರೆ..
ಇರಾನ್ ವಿಚಾರದಲ್ಲಿ ಟ್ರಂಪ್ ವರಸೆ ಬದಲಾವಣೆ
ಇರಾನ್ ಮೇಲೆ ದಾಳಿ ಮಾಡಲು ಸರ್ವಸನ್ನದ್ಧವಾಗಿದ್ದೇವೆ ಎಂದು ಹೇಳಿದ್ದ ಟ್ರಂಪ್, ಈಗ ರಾಜತಾಂತ್ರಿಕ ಮಾತುಕತೆಗೆ ಆದ್ಯತೆ ನೀಡುವ ನಿಲುವು ತೋರಿದ್ದಾರೆ. “ಇರಾನ್ ಅಣ್ವಸ್ತ್ರ ಹೊಂದಲು ನಾವು ಎಂದಿಗೂ ಬಿಡುವುದಿಲ್ಲ. ಆದರೆ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
