ಇರಾನ್ ಹಾಗೂ ಇಸ್ರೇಲ್-ಅಮೆರಿಕಾದ ಸಂಘರ್ಷವು ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ದಾಳಿಗೆ ಯತ್ನಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಡ್ರೋನ್ ದಾಳಿ ವಿಫಲ
ಮೂಲಗಳ ಪ್ರಕಾರ, ಇರಾನ್ ಬೆಂಬಲಿತ ಹೌತಿಗಳ ಡ್ರೋನ್‌ವೊಂದು ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಾದ ಮೆಕ್ಕಾ ಮತ್ತು ಮದೀನಾ ನಗರಗಳನ್ನು ಪ್ರವೇಶಿಸಲು ಯತ್ನಿಸಿದೆ. ಆದರೆ, ಎಚ್ಚೆತ್ತ ಅರಬ್ ಮೈತ್ರಿಕೂಟದ ಸೇನೆಯು ಅದನ್ನು ಯಶಸ್ವಿಯಾಗಿ ತಡೆದು ನಾಶಪಡಿಸಿದೆ.
ಸೌದಿ ಸೇನೆಯ ಖಡಕ್ ವಾರ್ನಿಂಗ್
ಪವಿತ್ರ ಸ್ಥಳಗಳ ಮೇಲಿನ ದಾಳಿಯ ಯತ್ನಕ್ಕೆ ತೀವ್ರವಾಗಿ ಕೆರಳಿರುವ ಸೌದಿ ಸೇನೆಯು, “ನಮ್ಮ ಪವಿತ್ರ ಸ್ಥಳಗಳ ಮೇಲೆ ಕೈ ಹಾಕಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ” ಎಂದು ಕಷ್ಟದ ಎಚ್ಚರಿಕೆ ನೀಡಿದೆ.
ಹೌತಿಗಳ ಸ್ಪಷ್ಟನೆ
ಸೌದಿಯಿಂದ ಎಚ್ಚರಿಕೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಹೌತಿ ಬಂಡುಕೋರರು, “ನಮ್ಮ ಟಾರ್ಗೆಟ್ ಸೌದಿ ಸರ್ಕಾರದ ಪ್ರಮುಖ ನೆಲೆಗಳೇ ಹೊರತು ಮೆಕ್ಕಾ ಅಥವಾ ಮದೀನಾ ಅಲ್ಲ” ಎಂದಿದ್ದಾರೆ. ಆದರೂ ಸೌದಿಯನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಬೆದರಿಕೆ ಹಾಕಿರುವುದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಅಮೆರಿಕಾದಿಂದ ಪ್ರವಾಸ ಎಚ್ಚರಿಕೆ
ಹೌತಿಗಳ ನಿರಂತರ ದಾಳಿಯ ಭೀತಿಯಿಂದಾಗಿ, ಸದ್ಯಕ್ಕೆ ಯಾರೂ ಕೂಡ ಮೆಕ್ಕಾ ಹಾಗೂ ಮದೀನಾ ಪ್ರವಾಸ ಕೈಗೊಳ್ಳಬೇಡಿ ಎಂದು ಅಮೆರಿಕ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ, ಸೌದಿಯಲ್ಲಿ ವಾಸಿಸುತ್ತಿರುವ ತನ್ನ ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಮತ್ತೆ ತೈಲ ಸಂಕಷ್ಟದ ಭೀತಿ
ಈ ಸಂಘರ್ಷದಿಂದಾಗಿ ಪ್ರಮುಖ ‘ಹಾರ್ಮುಜ್ ಜಲಸಂಧಿ’ಯಲ್ಲಿ ತೈಲ ಹಡಗುಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಗೆ ಕಾರಣವಾಗಲಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
