ಭಾರತಕ್ಕೆ ಶೇ.50 ಟ್ರಂಪ್‌ ಟ್ಯಾಕ್ಸ್..ಯಾವ ವಸ್ತುಗಳಿಗೆ ಎಷ್ಟು ತೆರಿಗೆ?

Untitled design 2025 08 27t130717.630

ಗೌರಿ-ಗಣೇಶ ಹಬ್ಬದ ಸಂಭ್ರಮದ ನಡುವೆಯೇ ಭಾರತಕ್ಕೆ ಅಮೆರಿಕದಿಂದ ಆರ್ಥಿಕ ಆಘಾತ ಸಿಕ್ಕಿದೆ. ರಷ್ಯಾದಿಂದ ತೈಲ ಖರೀದಿಯನ್ನು ನೆಪವಾಗಿಟ್ಟುಕೊಂಡು, ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ.25 ಹೆಚ್ಚುವರಿ ತೆರಿಗೆ ವಿಧಿಸುವ ಕರಡು ಅಧಿಸೂಚನೆಯನ್ನು ಅಮೆರಿಕ ಮಂಗಳವಾರ ಹೊರಡಿಸಿದೆ. ಆಗಸ್ಟ್ 26ರಿಂದ ಈ ತೆರಿಗೆ ಜಾರಿಗೆ ಬಂದಿದೆ. ಈಗಾಗಲೇ ಶೇ.25 ತೆರಿಗೆ ಇದ್ದ ಭಾರತೀಯ ಉತ್ಪನ್ನಗಳ ಮೇಲೆ, ಈಗ ಒಟ್ಟಾರೆ ಶೇ.50 ತೆರಿಗೆ ಹೊರೆ ಬೀಳಲಿದೆ. ಇದರಿಂದ ಭಾರತದ ರಫ್ತು ಉತ್ಪನ್ನಗಳ ಶೇ.66ರಷ್ಟು, ಅಂದರೆ ಸುಮಾರು 4 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳ ಮೇಲೆ ತೆರಿಗೆಯ ಕಾರ್ಮೋಡ ಬೀಳಲಿದೆ.

ಟ್ರಂಪ್‌ನ ತೆರಿಗೆ ಬೆದರಿಕೆ ಜಾರಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 7ರಂದೇ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ.50 ತೆರಿಗೆ ವಿಧಿಸುವ ಬೆದರಿಕೆ ಹಾಕಿದ್ದರು. ರಷ್ಯಾದ ಯುದ್ಧಕ್ಕೆ ಭಾರತ ತೈಲ ಖರೀದಿಯ ಮೂಲಕ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದ ಅವರು, ಮಾತುಕತೆಗೆ 21 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ, ಈಗ ಆ ಗಡುವು ಮುಗಿದ ಕೂಡಲೇ ಶೇ.25 ಹೆಚ್ಚುವರಿ ತೆರಿಗೆಯ ಅಧಿಸೂಚನೆಯನ್ನು ಜಾರಿಗೊಳಿಸಿದ್ದಾರೆ. ಭಾರತದ ಜೊತೆಗೆ ಬ್ರೆಜಿಲ್‌ನಂತಹ ದೇಶಗಳ ಮೇಲೂ ಇದೇ ರೀತಿಯ ತೆರಿಗೆ ವಿಧಿಸಲಾಗಿದೆ.

ಯಾವ ವಸ್ತುಗಳಿಗೆ ತೆರಿಗೆ?

ಈ ತೆರಿಗೆಯಿಂದ ಜವುಳಿ, ಆಭರಣಗಳು, ಫರ್ನಿಚರ್, ಕಾರ್ಪೆಟ್‌ಗಳು, ಯಂತ್ರೋಪಕರಣಗಳು, ಸಿಗಡಿ, ಇತರ ಸಮುದ್ರ ಉತ್ಪನ್ನಗಳು ಮತ್ತು ಚರ್ಮದ ಉತ್ಪನ್ನಗಳ ಮೇಲೆ ಭಾರೀ ಹೊರೆ ಬೀಳಲಿದೆ. ಉದಾಹರಣೆಗೆ, ಸುಮಾರು 17,000 ಕೋಟಿ ರು. ಮೌಲ್ಯದ ಸಿಗಡಿ ಮತ್ತು 94,000 ಕೋಟಿ ರು. ಮೌಲ್ಯದ ಜವುಳಿ ಉತ್ಪನ್ನಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಬೆಂಗಳೂರು, ಎನ್‌ಸಿಆರ್, ತಿರುಪೂರು, ಮತ್ತು ಗುಜರಾತ್‌ನ ಜವುಳಿ ಉದ್ಯಮಕ್ಕೆ ಈ ತೆರಿಗೆಯಿಂದ ದೊಡ್ಡ ಹೊಡೆತ ಬೀಳಲಿದೆ.

ಯಾವ ವಸ್ತುಗಳಿಗೆ ವಿನಾಯಿತಿ?

ಔಷಧ, ಉಕ್ಕು, ಅಲ್ಯೂಮಿನಿಯಂ, ತಾಮ್ರದ ವಸ್ತುಗಳು, ಪ್ಯಾಸೆಂಜರ್ ಕಾರುಗಳು, ಕಡಿಮೆ ಸಾಮರ್ಥ್ಯದ ಟ್ರಕ್‌ಗಳು, ಆಟೋ ಬಿಡಿಭಾಗಗಳು ಮತ್ತು ಔಷಧ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಈ ತೆರಿಗೆಯಿಂದ ವಿನಾಯಿತಿ ಸಿಕ್ಕಿದೆ.

ಈ ತೆರಿಗೆಯಿಂದ ಕಾರ್ಮಿಕ ಕೇಂದ್ರಿತ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಮೇಲೆ ತೀವ್ರ ಪರಿಣಾಮ ಬೀಳಲಿದೆ. ಬೇಡಿಕೆ ಕುಸಿತದಿಂದಾಗಿ ಕಂಪನಿಗಳಲ್ಲಿ ಉದ್ಯೋಗ ಕಡಿತದ ಆತಂಕ ಹೆಚ್ಚಾಗಿದೆ. ಆರ್ಥಿಕ ತಜ್ಞರ ಪ್ರಕಾರ, ಈ ತೆರಿಗೆಯಿಂದ 2025-26ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಗೆ ಶೇ.0.2 ರಿಂದ ಶೇ.1ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

Exit mobile version