‘ನನ್ನ ವೀರ್ಯದಿಂದ ಮಕ್ಕಳು ಹುಟ್ಟಿದ್ರೆ ಎಲ್ಲಾ ಖರ್ಚು ನನ್ನದೇ’: ಟೆಲಿಗ್ರಾಂ ಸಂಸ್ಥಾಪಕನ ಅಚ್ಚರಿ ಆಫರ್!

Untitled design 2025 12 25T172733.076

ಅಮೆರಿಕ: ಟೆಲಿಗ್ರಾಂ (Telegram) ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ (Pavel Durov) ತಮ್ಮ ವೈಯಕ್ತಿಕ ಜೀವನ ಮತ್ತು ವೀರ್ಯ ದಾನದ ಕುರಿತು ಅಚ್ಚರಿ ಹೇಳಿಕೆ ನೀಡಿದ್ದಾರೆ. ಈಗಾಗಲೇ 12ಕ್ಕೂ ಹೆಚ್ಚು ದೇಶಗಳಲ್ಲಿ ವೀರ್ಯ ದಾನದ ಮೂಲಕ ಸುಮಾರು 100 ಮಕ್ಕಳಿಗೆ ತಂದೆಯಾಗಿರುವುದಾಗಿ ಹೇಳಿಕೊಂಡಿರುವ ಡುರೊವ್, ಮತ್ತೊಂದು ಅಚ್ಚರಿಯ ಘೋಷಣೆಯನ್ನು ಹೊರಹಾಕಿದ್ದಾರೆ.

ನನ್ನ ವೀರ್ಯವನ್ನು ಬಳಸಿಕೊಂಡು ಯಾವುದೇ ಮಹಿಳೆ ಸಂತಾನ ಹೊಂದಲು ಮುಂದಾದರೆ, ಆ ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಡುರೊವ್ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ವೈದ್ಯಕೀಯ ಚಿಕಿತ್ಸೆ, ಐವಿಎಫ್ (IVF) ವೆಚ್ಚಗಳು ಸೇರಿದಂತೆ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ಖರ್ಚುಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡುರೊವ್, “37 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ನನ್ನ ವೀರ್ಯವನ್ನು ಬಳಸಿಕೊಂಡು ತಾಯಿಯಾಗಲು ಬಯಸಿದರೆ, ಅವರ ಐವಿಎಫ್ ಚಿಕಿತ್ಸೆಗೆ ಬೇಕಾಗುವ ಸಂಪೂರ್ಣ ವೆಚ್ಚವನ್ನು ನಾನು ಭರಿಸುತ್ತೇನೆ. ಇದು ಯಾವುದೇ ಷರತ್ತುಗಳಿಲ್ಲದ ಘೋಷಣೆ” ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇಷ್ಟೇ ಅಲ್ಲದೆ, ತಮ್ಮ ವೀರ್ಯದಿಂದ ಜನಿಸಿದ ಎಲ್ಲಾ ಮಕ್ಕಳಿಗೂ ತಮ್ಮ ಆಸ್ತಿಯಲ್ಲಿ ಸಮಾನ ಪಾಲು ನೀಡುವುದಾಗಿ ಡುರೊವ್ ಭರವಸೆ ನೀಡಿದ್ದಾರೆ.  ಪಾವೆಲ್ ಡುರೊವ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು $17 ಬಿಲಿಯನ್ (ಸುಮಾರು 1.4 ಲಕ್ಷ ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಈ ಸಂಪತ್ತಿನಲ್ಲಿ ತಮ್ಮ ಸಂತಾನವೆಂದು ಗುರುತಿಸಲ್ಪಡುವ ಎಲ್ಲ ಮಕ್ಕಳಿಗೂ ಸಮಾನ ಹಕ್ಕು ಇರುತ್ತದೆ ಎಂದು ಅವರು ಹೇಳಿದ್ದಾರೆ.

ಡುರೊವ್ ಅವರ ಈ ಘೋಷಣೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಕುಟುಂಬ ವ್ಯವಸ್ಥೆ, ಪೋಷಕರ ಹೊಣೆಗಾರಿಕೆ, ಆಸ್ತಿ ಹಕ್ಕು ಮತ್ತು ಕಾನೂನು ಮಾನ್ಯತೆ ಕುರಿತಂತೆ ವಿವಿಧ ದೇಶಗಳಲ್ಲಿ ವಿಭಿನ್ನ ಕಾನೂನುಗಳಿವೆ. ವೀರ್ಯ ದಾನದ ಮೂಲಕ ಜನಿಸಿದ ಮಕ್ಕಳಿಗೆ ಆಸ್ತಿ ಹಂಚಿಕೆ ಹೇಗೆ ಜಾರಿಯಾಗುತ್ತದೆ ಎಂಬುದು ಕಾನೂನು ತಜ್ಞರಲ್ಲಿ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಡುರೊವ್ ಅವರ ನಿಲುವನ್ನು “ಜವಾಬ್ದಾರಿಯುತ ಮತ್ತು ಪ್ರಗತಿಪರ” ಎಂದು ಶ್ಲಾಘಿಸಿದ್ದಾರೆ. ಮತ್ತೊಂದೆಡೆ, ಕೆಲವರು ಇದನ್ನು “ಅಸಾಮಾನ್ಯ ಮತ್ತು ವಿವಾದಾತ್ಮಕ” ಘೋಷಣೆ ಎಂದು ಟೀಕಿಸಿದ್ದಾರೆ. ವಿಶೇಷವಾಗಿ, ಸಂತಾನೋತ್ಪತ್ತಿಯನ್ನು ಈ ರೀತಿ ಸಾರ್ವಜನಿಕ ಚರ್ಚೆಗೆ ತರುವುದರಿಂದ ಸಮಾಜದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಪಾವೆಲ್ ಡುರೊವ್ ತಾವು ಮಕ್ಕಳ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. “ನನ್ನಿಂದ ಜನಿಸಿದ ಯಾವುದೇ ಮಗು ನಿರ್ಲಕ್ಷ್ಯಕ್ಕೆ ಒಳಗಾಗಬಾರದು. ಆ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟದ ಹೊಣೆ ನನ್ನದೇ” ಎಂದು ತಿಳಿಸಿದ್ದಾರೆ.

Exit mobile version