ಸಿರಿಯಾದ ಮಸೀದಿಯಲ್ಲಿ ಭೀಕರ ಬಾಂಬ್ ಸ್ಫೋಟ: ಪ್ರಾರ್ಥನೆ ವೇಳೆ 8 ಮಂದಿ ಸಾವು

Untitled design 2025 12 26T211426.562

ಡಮಾಸ್ಕಸ್‌, ಡಿ.26: ಸಿರಿಯಾದಲ್ಲಿ ಮತ್ತೊಂದು ಭೀಕರ ಘಟನೆ ಸಂಭವಿಸಿದೆ. ದೇಶದ ಹೋಮ್ಸ್ ನಗರದಲ್ಲಿರುವ ಮಸೀದಿಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದ್ದು, ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಹೋಮ್ಸ್ ಸಿಟಿಯ ಅಲವೈಟ್ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿರುವ ಇಮಾಮ್ ಅಲಿ ಬಿನ್ ಅಬಿ ತಾಲಿಬ್ ಮಸೀದಿಯೊಳಗೆ ಈ ಸ್ಫೋಟ ಸಂಭವಿಸಿದೆ. ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲೇ ದಾಳಿ ನಡೆದಿರುವುದು ಶಂಕೆ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಇದನ್ನು ಪೂರ್ವನಿಯೋಜಿತ ಭಯೋತ್ಪಾದಕ ಕೃತ್ಯ ಎಂದು ಸಿರಿಯಾದ ಆಂತರಿಕ ಸಚಿವಾಲಯ ಖಚಿತಪಡಿಸಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮಸೀದಿಯೊಳಗೆ ಈಗಾಗಲೇ ಸ್ಫೋಟಕ ವಸ್ತುಗಳನ್ನು ಇರಿಸಲಾಗಿದ್ದು, ಅವು ಪ್ರಾರ್ಥನೆ ವೇಳೆ ಸ್ಫೋಟಗೊಂಡಿವೆ ಎಂದು ತಿಳಿದುಬಂದಿದೆ. ಸ್ಫೋಟದಿಂದ ಮಸೀದಿಯ ಗೋಡೆಯಲ್ಲಿ ದೊಡ್ಡ ರಂಧ್ರ ಉಂಟಾಗಿದ್ದು,  ಮಸೀದಿಯ ಒಳಗಡೆ ಕಾರ್ಪೆಟ್‌ಗಳು, ಧಾರ್ಮಿಕ ಪುಸ್ತಕಗಳು ಹಾಗೂ ವಸ್ತುಗಳು ಚದುರಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಘಟನೆಯ ಬಳಿಕ ಭದ್ರತಾ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಪರಿಶೀಲಿಸುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ತನಿಖಾ ತಂಡಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೋಮ್ಸ್ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸ್ಥಳೀಯ ನಿವಾಸಿಯೊಬ್ಬರು ಘಟನೆ ಕುರಿತು ಮಾತನಾಡಿ, “ಒಂದೇ ಕ್ಷಣದಲ್ಲಿ ಭೀಕರ ಸ್ಫೋಟದ ಶಬ್ದ ಕೇಳಿಬಂತು. ಎಲ್ಲೆಡೆ ಗೊಂದಲ ಉಂಟಾಯಿತು. ಜನರು ಭಯದಿಂದ ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ಆಂಬ್ಯುಲೆನ್ಸ್‌ಗಳ ಸೈರನ್‌ ಶಬ್ದವೇ ಸುತ್ತಮುತ್ತ ತುಂಬಿಕೊಂಡಿದೆ” ಎಂದು ಹೇಳಿದರು.

ಸಿರಿಯಾದ ವಿದೇಶಾಂಗ ಸಚಿವಾಲಯ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, “ಇದು ಮಾನವೀಯತೆ ಹಾಗೂ ನೈತಿಕ ಮೌಲ್ಯಗಳ ಮೇಲೆ ನಡೆದ ಹೇಡಿತನದ ದಾಳಿ. ಸಿರಿಯಾವನ್ನು ಅಸ್ಥಿರಗೊಳಿಸುವ ಮತ್ತು ಜನರ ಮನೋಬಲ ಕುಗ್ಗಿಸುವ ಹತಾಶ ಪ್ರಯತ್ನಗಳ ಭಾಗವಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.

Exit mobile version