ರಿಯಾದ್: ಸುಡುವ ಬಿಸಿಲು, ವಿಶಾಲವಾದ ಮರುಭೂಮಿ ಮತ್ತು ಒಣ ಹವಾಮಾನಕ್ಕೆ ಹೆಸರಾದ ಸೌದಿ ಅರೇಬಿಯಾದಲ್ಲಿ ಪ್ರಕೃತಿಯ ಅದ್ಭುತವೊಂದು ಅನಾವರಣಗೊಂಡಿದೆ. ಕೇವಲ ಮರಳು ದಿಬ್ಬಗಳಿಂದ ಕೂಡಿದ್ದ ಈ ಪ್ರದೇಶವು ಈಗ ಸಂಪೂರ್ಣ ಹಿಮದಿಂದ ಕೂಡಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ. ಉತ್ತರ ಸೌದಿ ಅರೇಬಿಯಾದ ಪರ್ವತ ಶ್ರೇಣಿಗಳು ಸಂಪೂರ್ಣವಾಗಿ ಹಿಮದಿಂದ ಕಂಗೊಳಿಸುತ್ತಿದ್ದು, ಮರಳುಗಾಡು ಈಗ ಹಿಮಲೋಕವಾಗಿ ಮಾರ್ಪಟ್ಟಿದೆ.
ತಬೂಕ್‌ನಲ್ಲಿ ಮೈನಸ್ ಡಿಗ್ರಿ ತಾಪಮಾನ
ಸೌದಿ ಅರೇಬಿಯಾದ ತಬೂಕ್ ಪ್ರದೇಶದಲ್ಲಿರುವ ಜಬಲ್ ಅಲ್ ಲಾವ್ ಬೆಟ್ಟಗಳಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಸಮುದ್ರ ಮಟ್ಟದಿಂದ ಸುಮಾರು 2580 ಮೀಟರ್ ಎತ್ತರದಲ್ಲಿರುವ ಈ ‘ಬಾದಾಮಿ ಬೆಟ್ಟ’ಗಳಲ್ಲಿ ತಾಪಮಾನವು ಮೈನಸ್ ಡಿಗ್ರಿಗೆ ಕುಸಿದಿದೆ. ಹಿಮದಿಂದ ಆವೃತವಾದ ಮರುಭೂಮಿಯ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ದೃಶ್ಯವನ್ನ ಕಂಡ ಜನರು, ಇವು ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಿದ ಚಿತ್ರಗಳಿರಬಹುದು ಎಂದು ಅನೇಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಬದಲಾದ ಹವಾಮಾನ
ಕೇವಲ ಹಿಮಪಾತ ಮಾತ್ರವಲ್ಲದೆ ಹೈಲ್ಯಾಂಡ್ಸ್‌ನಲ್ಲಿ ಸಾಧಾರಣ ಮಳೆಯೂ ವರದಿಯಾಗಿದೆ. ಬಿರ್ ಬಿನ್ ಹಿರ್ಮಾಸ್ ಮತ್ತು ಅಲ್-ಉಯನ್ನಾದಂತಹ ಪ್ರದೇಶಗಳಲ್ಲಿ ಹವಾಮಾನವು ಸಂಪೂರ್ಣವಾಗಿ ಬದಲಾಗಿದೆ. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದಾದ್ಯಂತ ಪ್ರವಾಸಿಗರು ಜಬಲ್ ಅಲ್ ಲಾವ್ ಪರ್ವತಗಳತ್ತ ಬರುತ್ತಿದ್ದಾರೆ. ಸೌದಿಯ ಹವಾಮಾನ ಇಲಾಖೆಯು ರಿಯಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.
ಸೌದಿಯಲ್ಲಿ ಉಂಟಾಗಿರುವ ಈ ಬದಲಾವಣೆಯು ಧಾರ್ಮಿಕ ಚರ್ಚೆಗಳಿಗೂ ನಾಂದಿ ಹಾಡಿದೆ. ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಅವರ ಭವಿಷ್ಯವಾಣಿಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅಂತಿಮ ದಿನಗಳು ಹತ್ತಿರವಾದಾಗ ಅರೇಬಿಯನ್ ಪೆನಿನ್ಸುಲಾವು ಮತ್ತೆ ಹಸಿರಿನಿಂದ ಕೂಡಿ, ಹರಿಯುವ ನದಿಗಳಿಂದ ತುಂಬಿಕೊಳ್ಳಲಿದೆ” ಎಂಬ ಉಲ್ಲೇಖವು ಇಸ್ಲಾಮಿಕ್ ಹದೀಸ್‌ಗಳಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಸೌದಿಯಲ್ಲಿ ಹೆಚ್ಚುತ್ತಿರುವ ಮಳೆ, ಹಿಮಪಾತ ಮತ್ತು ಬೆಟ್ಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಸಿರು ಈ ಭವಿಷ್ಯವಾಣಿಯ ಸಂಕೇತವಿರಬಹುದೇ ಎಂದು ಜನ ಅನುಮಾನ ವ್ಯಕ್ತಪಡಿಸಿದ್ದಾರೆ.
ಹವಾಮಾನ ತಜ್ಞರ ಪ್ರಕಾರ, ಇದು ಜಾಗತಿಕ ಹವಾಮಾನ ಬದಲಾವಣೆಯ (Global Warming) ಪರಿಣಾಮವಾಗಿದೆ. ಮರುಭೂಮಿಯ ಮಣ್ಣಿನಲ್ಲಿ ತೇವಾಂಶ ಹೆಚ್ಚುತ್ತಿರುವುದರಿಂದ ಸಸ್ಯವರ್ಗದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದ್ದಾರೆ.
