ಮಾಸ್ಕೋ: ರಷ್ಯಾದಲ್ಲಿ ಮೂರು ದಿನಗಳ ಕಾಲ ನಡೆದ ಸಂಸತ್ ಚುನಾವಣೆಯ ಮತದಾನ ಅಂತಿಮ ಹಂತ ತಲುಪುತ್ತಿದ್ದಂತೆ ಉಕ್ರೇನ್ ಭಾರೀ ಡ್ರೋನ್ ದಾಳಿ ನಡೆಸಿದೆ. ರಷ್ಯಾದ ರಾಜಧಾನಿ ಮಾಸ್ಕೋ ಸೇರಿದಂತೆ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು 1,000ಕ್ಕೂ ಹೆಚ್ಚು ಡ್ರೋನ್‌ಗಳನ್ನು ಉಡಾಯಿಸಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯನ್ನು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ರಾಜಧಾನಿ ಮೇಲೆ ನಡೆದ ಅತಿದೊಡ್ಡ ಡ್ರೋನ್ ದಾಳಿಗಳಲ್ಲಿ ಒಂದೆಂದು ವಿವರಿಸಿದ್ದಾರೆ.
ದಾಳಿಯ ಪರಿಣಾಮ ಮಾಸ್ಕೋ ಪ್ರದೇಶದಲ್ಲಿ ಇಬ್ಬರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮಾಸ್ಕೋದಲ್ಲಿರುವ ಪ್ರಮುಖ ತೈಲ ಸಂಸ್ಕರಣಾಗಾರ ಹಾಗೂ ವಸತಿ ಕಟ್ಟಡವೊಂದಕ್ಕೂ ಹಾನಿಯಾಗಿದೆ. ರಮೆನ್ಸ್ಕೋಯೆ ಪ್ರದೇಶದಲ್ಲಿನ ಬಹುಮಹಡಿ ವಸತಿ ಕಟ್ಟಡಕ್ಕೆ ಹಾನಿಯಾದ ಹಿನ್ನೆಲೆ ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
1,100ಕ್ಕೂ ಹೆಚ್ಚು ಡ್ರೋನ್‌ಗಳು ಧ್ವಂಸ
ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ದೇಶದ ವಿವಿಧ ಭಾಗಗಳು, ಕ್ರಿಮಿಯಾ ಮತ್ತು ಕಪ್ಪು ಸಮುದ್ರದ ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತಿದ್ದ ಸುಮಾರು 1,100 ಉಕ್ರೇನಿಯನ್ ಡ್ರೋನ್‌ಗಳನ್ನು ರಷ್ಯಾದ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಇನ್ನು ಮಾಸ್ಕೋ ಮೇಯರ್ ಸೊಬ್ಯಾನಿನ್ ಪ್ರಕಾರ, ರಾಜಧಾನಿಯತ್ತ ಬರುತ್ತಿದ್ದ ಸುಮಾರು 450 ಡ್ರೋನ್‌ಗಳನ್ನು ಮಾರ್ಗಮಧ್ಯದಲ್ಲೇ ತಡೆದು ನಾಶಪಡಿಸಲಾಗಿದೆ.
ಈ ದಾಳಿಯ ವೇಳೆ ಮಾಸ್ಕೋ ಆಯಿಲ್ ರಿಫೈನರಿಗೂ ಹಾನಿಯಾಗಿದೆ. ದಾಳಿಯಿಂದ ಉಂಟಾದ ಬೆಂಕಿ ಮತ್ತು ಹೊಗೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಆದಾಗ್ಯೂ, ದಾಳಿಯಿಂದ ಉಂಟಾದ ಒಟ್ಟಾರೆ ಹಾನಿಯ ಪ್ರಮಾಣದ ಕುರಿತು ರಷ್ಯಾ ಮತ್ತು ಉಕ್ರೇನ್ ಪರ ವಲಯಗಳಿಂದ ವಿಭಿನ್ನ ಮಾಹಿತಿಗಳು ಹೊರಬರುತ್ತಿವೆ.
ಚುನಾವಣೆಯ ಅಂತಿಮ ದಿನವೇ ದಾಳಿ
ಈ ದಾಳಿಯ ಮತ್ತೊಂದು ಪ್ರಮುಖ ಅಂಶವೆಂದರೆ, ರಷ್ಯಾದ ಸಂಸತ್ ಚುನಾವಣೆಯ ಅಂತಿಮ ದಿನವೇ ಇದು ನಡೆದಿರುವುದು. ಫೆಬ್ರವರಿ 2022ರಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಪೂರ್ಣ ಪ್ರಮಾಣದ ಯುದ್ಧ ಆರಂಭಿಸಿದ ಬಳಿಕ ನಡೆಯುತ್ತಿರುವ ಮೊದಲ ಸಂಸತ್ ಚುನಾವಣೆ ಇದಾಗಿದೆ. ಸೆಪ್ಟೆಂಬರ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ಮತದಾನ ನಡೆದಿದೆ.
ರಷ್ಯಾ, ಯುದ್ಧದ ಬಳಿಕ ತನ್ನ ನಿಯಂತ್ರಣಕ್ಕೆ ಬಂದಿರುವ ಉಕ್ರೇನ್‌ನ ಕೆಲವು ಪ್ರದೇಶಗಳು ಹಾಗೂ 2014ರಲ್ಲಿ ವಶಪಡಿಸಿಕೊಂಡ ಕ್ರಿಮಿಯಾದಲ್ಲೂ ಮತದಾನ ನಡೆಸಿದೆ. ಈ ಪ್ರದೇಶಗಳಲ್ಲಿ ರಷ್ಯಾ ನಡೆಸಿದ ಚುನಾವಣೆಯನ್ನು ಉಕ್ರೇನ್ ಅಕ್ರಮ ಎಂದು ಖಂಡಿಸಿದೆ.
ಚುನಾವಣೆಗೆ ಅಡ್ಡಿಪಡಿಸುವ ಯತ್ನ ಎಂದ ಮಾಸ್ಕೋ
ಮಾಸ್ಕೋ ಮೇಯರ್ ಸೊಬ್ಯಾನಿನ್, ಈ ಬೃಹತ್ ಡ್ರೋನ್ ದಾಳಿಯ ಉದ್ದೇಶ ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸುವುದಾಗಿತ್ತು ಎಂದು ಆರೋಪಿಸಿದ್ದಾರೆ. ಆದರೆ ದಾಳಿಯ ನಡುವೆಯೂ ಮತದಾನ ಪ್ರಕ್ರಿಯೆ ಮುಂದುವರಿದಿದ್ದು, ಚುನಾವಣೆಗೆ ಯಾವುದೇ ದೊಡ್ಡ ಮಟ್ಟದ ಅಡಚಣೆ ಉಂಟಾಗಿಲ್ಲ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ.
ಉಕ್ರೇನ್‌ನಿಂದ ಈ ನಿರ್ದಿಷ್ಟ ದಾಳಿಯ ಕುರಿತು ತಕ್ಷಣದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ. ಆದರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಷ್ಯಾದ ಯುದ್ಧ ಸಾಮರ್ಥ್ಯಕ್ಕೆ ನೆರವಾಗುವ ಇಂಧನ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿರುವುದಾಗಿ ವರದಿಯಾಗಿದೆ.
