ಮಾಸ್ಕೋ: ರಷ್ಯಾ ಮಿಲಿಟರಿ ಸಾರಿಗೆ ವಿಮಾನವೊಂದು ಕ್ರಿಮಿಯನ್ ಪರ್ಯಾಯ ದ್ವೀಪದ ಬಳಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 29 ಮಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಅಧಿಕೃತವಾಗಿ ದೃಢಪಡಿಸಿದೆ. ಉಕ್ರೇನ್‌ನಿಂದ ರಷ್ಯಾ ಸ್ವಾಧೀನಪಡಿಸಿಕೊಂಡ ಕಪ್ಪು ಸಮುದ್ರದ ಸಮೀಪವಿರುವ ದ್ವೀಪದಲ್ಲಿ ಈ ಘಟನೆ ನಡೆದಿದೆ.
ಮಾರ್ಚ್ 31 ರಂದು ಸಂಜೆ ಮಾಸ್ಕೋ ಕಾಲಮಾನ ಸುಮಾರು 18:00 ಗಂಟೆಗೆ ರಷ್ಯಾದ ಆಂಟೊನೊವ್-26 (An-26) ಮಿಲಿಟರಿ ಸಾರಿಗೆ ವಿಮಾನವು ನಿಗದಿತ ಹಾರಾಟ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ರಾಡಾರ್ ಸಂಪರ್ಕ ಕಳೆದುಕೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಶೋಧ ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿದ್ದವು. ಇಂದು ಅಪಘಾತದ ಸ್ಥಳವನ್ನು ಪತ್ತೆಹಚ್ಚಲಾಗಿದ್ದು, ವಿಮಾನದಲ್ಲಿದ್ದ 23 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸೇರಿದಂತೆ ಒಟ್ಟು 29 ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಅಪಘಾತಕ್ಕೆ ಕಾರಣವೇನು ?
ಕ್ರಿಮಿಯನ್ ಪರ್ಯಾಯ ದ್ವೀಪದ ಮೇಲೆ ಹಾರುತ್ತಿದ್ದಾಗ ಈ ವಿಮಾನವು ದೊಡ್ಡ ಬಂಡೆಗೆ ಅಪ್ಪಳಿಸಿ ಪತನಗೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ವಿಮಾನದ ಅವಶೇಷಗಳನ್ನು ಪರಿಶೀಲಿಸಿದಾಗ ಯಾವುದೇ ಬಾಹ್ಯ ಪ್ರಭಾವ ಅಥವಾ ಶತ್ರು ದೇಶಗಳ ದಾಳಿಯ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ, ವಿಮಾನದಲ್ಲಾದ ತಾಂತ್ರಿಕ ವೈಫಲ್ಯವೇ ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಈ ಕುರಿತು ರಷ್ಯಾ ಅಧಿಕಾರಿಗಳು ಅಧಿಕೃತ ತನಿಖೆಗೆ ಆದೇಶಿಸಿದ್ದು, ಅಂತಿಮ ವರದಿಗಾಗಿ ಕಾಯಲಾಗುತ್ತಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿರುವ ಕ್ರಿಮಿಯನ್ ಪರ್ಯಾಯ ದ್ವೀಪದಲ್ಲಿ ಈ ಅಪಘಾತ ಸಂಭವಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಸಾರಿಗೆ ಮತ್ತು ಸರಬರಾಜು ಕಾರ್ಯಗಳಿಗಾಗಿ ರಷ್ಯಾ ಮಿಲಿಟರಿ ಹೆಚ್ಚಾಗಿ ಬಳಸುವ An-26 ವಿಮಾನವು ಹೀಗೆ ಪತನಗೊಂಡಿರುವುದು ಮಿಲಿಟರಿ ವಲಯದಲ್ಲಿ ಆತಂಕ ಮೂಡಿಸಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಿಲಿಟರಿ ಅಧಿಕಾರಿಗಳೇ ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಅಪಘಾತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮೃತದೇಹಗಳನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ.
