ಮುಂಬೈ: ತಂದೆಯೊಂದಿಗೆ ನಡೆದ ಜಗಳದ ಸೇಡನ್ನು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಕೇವಲ 4 ವರ್ಷದ ಹಸುಗೂಸಿನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾನೆ. ಮಗುವಿನ ಕಾಲುಗಳನ್ನು ಹಿಡಿದು ಬಟ್ಟೆ ಒಗೆದಂತೆ ರಸ್ತೆಗೆ ಚಚ್ಚಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ಹಿನ್ನೆಲೆ ಏನು ?
ಆರೋಪಿ ಸಂದೀಪ್ ಪವಾರ್ ಎಂಬಾತ ಮಗುವಿನ ತಂದೆಯೊಂದಿಗೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರವಾಗಿ ಜಗಳವಾಡುತ್ತಿದ್ದ. ಈ ವೇಳೆ ಮಗುವಿನ ತಂದೆಯ ಮೇಲೆ ಏಕಾಏಕಿ ಹಲ್ಲೆ ಮಾಡಲು ಸಾಧ್ಯವಾಗದಿದ್ದಾಗ, ಹತ್ತಿರದಲ್ಲೇ ಆಟೋದಲ್ಲಿ ಕುಳಿತು ಆಟವಾಡುತ್ತಿದ್ದ 4 ವರ್ಷದ ಬಾಲಕನತ್ತ ಈತ ತಿರುಗಿದ್ದಾನೆ. ತನ್ನ ಆಕ್ರೋಶವನ್ನೆಲ್ಲಾ ಹಸುಗೂಸಿನ ಮೇಲೆ ತೀರಿಸಿಕೊಳ್ಳಲು ಮುಂದಾದ ಈತ ಮಾಡಿದ ಕೃತ್ಯ ಅಕ್ಷರಶಃ ಮೈ ಜುಂ ಎನಿಸುವಂತಿದೆ.
ಆಟೋದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಮಗುವನ್ನು ಎಳೆದಾಡಿದ ಆರೋಪಿ ಸಂದೀಪ್, ಮಗುವಿನ ಎರಡು ಕಾಲುಗಳನ್ನು ಹಿಡಿದು ಹೊರಗೆಳೆದಿದ್ದಾನೆ. ನಂತರ ಮಗುವನ್ನು ಗಾಳಿಯಲ್ಲಿ ಗಿರಗಿರನೆ ತಿರುಗಿಸಿ, ಬಟ್ಟೆ ಒಗೆಯುವಂತೆ ಮಗುವಿನ ತಲೆಯನ್ನು ರಸ್ತೆಗೆ ಬಲವಾಗಿ ಚಚ್ಚಿದ್ದಾನೆ. ಅಷ್ಟಕ್ಕೇ ಈತನ ವಿಕೃತಿ ನಿಂತಿಲ್ಲ. ರಸ್ತೆಯಲ್ಲಿ ಮಗು ಕಿರುಚಾಡುತ್ತಿದ್ದರೂ ಅದೆಲ್ಲವನ್ನೂ ಲೆಕ್ಕಿಸದ ಈತ, ಕೂಡಲೇ ಹತ್ತಿರದ ಕಟ್ಟಡದೊಳಗೆ ನುಗ್ಗಿ ಕಬ್ಬಿಣದ ರಾಡ್ ಒಂದನ್ನು ತಂದು ಮಗುವಿನ ತಲೆಗೆ ಮನಬಂದಂತೆ ಹೊಡೆದಿದ್ದಾನೆ.
ದಾಳಿಯಿಂದಾಗಿ ಮಗುವಿನ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಮಗುವನ್ನು ಕೂಡಲೇ ಸ್ಥಳೀಯರು ಮೀರಾ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗುವಿನ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಐಸಿಯುನಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಪೊಲೀಸ್ ವಶಕ್ಕೆ
ಘಟನೆ ನಡೆದ ಬೆನ್ನಲ್ಲೇ ಸ್ಥಳೀಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿ ಸಂದೀಪ್ ಪವಾರ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಯತ್ನ (IPC 307) ಸೇರಿದಂತೆ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಣ್ಣ ವಿಚಾರಕ್ಕೆ ಸಂಬಂಧಿಸಿದ ಜಗಳವು ಇಷ್ಟೊಂದು ದೊಡ್ಡ ಮಟ್ಟದ ಅಮಾನವೀಯ ಕೃತ್ಯಕ್ಕೆ ಕಾರಣವಾಗಿರುವುದು ದುರದೃಷ್ಟಕರ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
