ಬೆಂಗಳೂರು: ಸದಾ ವಿಭಿನ್ನ ಆಲೋಚನೆಗಳ ಮೂಲಕ ಗಮನ ಸೆಳೆಯುವ ನಟ, ನಿರ್ದೇಶಕ ಉಪೇಂದ್ರ ಇಂದು (ಏಪ್ರಿಲ್ 1) ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ‘ಪ್ರಜಾಕೀಯ’ ಪಕ್ಷದ ಮುಂದಿನ ದಾರಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 2028ರ ವಿಧಾನಸಭಾ ಚುನಾವಣೆ ಹಾಗೂ ಮುಂಬರುವ ಮುನ್ಸಿಪಲ್ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ‘ದಿ ರಿಯಲ್ ಪ್ರಜಾಕೀಯ’ ಎಂಬ ಹೊಸ ಸಿಸ್ಟಮ್ ಅನ್ನು ಅವರು ಜಾರಿಗೆ ತಂದಿದ್ದಾರೆ.
ನಾನು ಲೆಫ್ಟ್ ಅಲ್ಲ, ರೈಟ್ ಅಲ್ಲ.. ಸ್ಟ್ರೈಟ್ !
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ, ಇಂದಿನ ರಾಜಕಾರಣದಲ್ಲಿ ಯಾರಾದರೂ ನೇರವಾಗಿ ಮಾತನಾಡಿದರೆ ಅವರನ್ನು ಲೆಫ್ಟ್ ಅಥವಾ ರೈಟ್ ಎಂದು ಹಣೆಪಟ್ಟಿ ಹಚ್ಚುತ್ತಾರೆ. ಆದರೆ ನಾನು ಲೆಫ್ಟ್ ಅಲ್ಲ, ರೈಟ್ ಅಲ್ಲ.. ನಾನು ಯಾವಾಗಲೂ ಸ್ಟ್ರೈಟ್ (Straight). ಜೀವನದಲ್ಲಿ ಯಾರ ಮೇಲೂ ಡಿಪೆಂಡೆಂಟ್ ಆಗಿರಬಾರದು, ಇಂಡಿಪೆಂಡೆಂಟ್ ಆಗಿರಬೇಕು. ನಮ್ಮ ಪಕ್ಷ ಕೂಡ ಹಾಗೆಯೇ ಎಂದು ತಮ್ಮ ಸಿದ್ಧಾಂತವನ್ನು ವಿವರಿಸಿದರು.
ಪ್ರಜಾಕೀಯದಲ್ಲಿ ನಾಯಕತ್ವದ ಪರಿಕಲ್ಪನೆಯೇ ಇಲ್ಲ ಎಂದು ಪುನರುಚ್ಚರಿಸಿದ ಉಪ್ಪಿ, ನಮಗೆ ಜನರ ಬೇಡಿಕೆಗಳನ್ನು ಈಡೇರಿಸಲು ನಾಯಕ ಬೇಡ, ಕೆಲಸ ಮಾಡುವ ಕಾರ್ಮಿಕ ಬೇಕು. ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೋ ಅಂತಹವರು ಮಾತ್ರ ನಮ್ಮ ಪಾರ್ಟಿಗೆ ಬರಲಿ. ಸದ್ಯಕ್ಕೆ ಮುನ್ಸಿಪಲ್ ಚುನಾವಣೆಗಾಗಿ ವಾರ್ಡ್‌ವೈಸ್ ಮಾಡೆಲ್ ಸಿದ್ಧಪಡಿಸಿದ್ದೇವೆ. ಏರಿಯಾದ ಪ್ರತಿ ಸಮಸ್ಯೆಯನ್ನು ಗುರುತಿಸಿ, ಅದಕ್ಕೆ ಪರಿಹಾರ ನೀಡುವ ಚಾರ್ಟ್ ಸಿದ್ಧಪಡಿಸಲಾಗಿದೆ ಎಂದರು.
ಈ ಹೊಸ ಮಾಡೆಲ್‌ನಲ್ಲಿ ಅಭ್ಯರ್ಥಿ ಮತ್ತು ಮತದಾರರ ನಡುವೆ ನೇರ ಸಂಪರ್ಕ ಕಲ್ಪಿಸಲು ವಿಶೇಷ ಆ್ಯಪ್ ಮತ್ತು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
-
ಸೆಲೆಕ್ಷನ್ ಆದಮೇಲೆ ಎಲೆಕ್ಷನ್: ಒಬ್ಬ ಸ್ಪರ್ಧಿ ಜನರೊಂದಿಗೆ ಎಷ್ಟು ಕನೆಕ್ಟ್ ಆಗಿದ್ದಾನೆ ಎಂಬುದು ರೇಟಿಂಗ್ ಮೂಲಕ ತಿಳಿಯುತ್ತದೆ. ಜನರು ಆತನನ್ನು ಮೆಚ್ಚಿದರೆ ಮಾತ್ರ ಆತ ಚುನಾವಣೆಗೆ ಸ್ಪರ್ಧಿಸಬಹುದು.
-
ರೈಟ್ ಟು ರೀಕಾಲ್: ಕೆಲಸ ಮಾಡದ ಅಭ್ಯರ್ಥಿಯನ್ನು ಜನರೇ ಕೆಳಗಿಳಿಸುವ ಅವಕಾಶ ಈ ಸಿಸ್ಟಮ್ನಲ್ಲಿದೆ.
-
ನೇರ ಸಂಪರ್ಕ: ಫೇಸ್ಬುಕ್ ಲೈವ್, ವಿಡಿಯೋ ಚಾಟ್ ಮತ್ತು ಮೆಸೇಜ್ ಮೂಲಕ ಸ್ಪರ್ಧಿಗಳು ಮತದಾರರ ಸಮಸ್ಯೆಗಳಿಗೆ ಉತ್ತರಿಸಬೇಕು. ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಲ್ಲ, ಜನರೇ ಮಾಡುತ್ತಾರೆ.
ನಮ್ಮ ಪಕ್ಷ ಕೋಮಾದಲ್ಲಿಲ್ಲ
ಪ್ರಜಾಕೀಯ ಪಕ್ಷ ಆಕ್ಟಿವ್ ಆಗಿಲ್ಲ ಎಂಬ ಟೀಕೆಗಳಿಗೆ ಉತ್ತರಿಸಿದ ಉಪೇಂದ್ರ, ನಮ್ಮ ಪಕ್ಷ ಕೋಮಾದಲ್ಲಿಲ್ಲ, ಹಾಗೆ ನೋಡುವವರೇ ಕೋಮಾದಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾ ಕಮೆಂಟ್ ನೋಡಿ ನಮ್ಮ ಪಕ್ಷದ ಬಗ್ಗೆ ನಿರ್ಧಾರ ಮಾಡಬೇಡಿ. ‘ರೈಟ್ ಟು ರೀಕಾಲ್’ ಕಾನೂನು ಬರುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಇದು ಬಿಜೆಪಿ ಅಥವಾ ಇತರ ಪಕ್ಷಗಳಂತೆ ಹಣ, ಆಮಿಷ ಒಡ್ಡುವ ಪಕ್ಷವಲ್ಲ. ಇಲ್ಲಿ ಏನನ್ನೂ ನಿರೀಕ್ಷಿಸಬೇಡಿ, ಇದು ಕೇವಲ ಕೆಲಸ ಮಾಡುವ ವೇದಿಕೆ ಎಂದು ಸ್ಪಷ್ಟಪಡಿಸಿದರು. ತಾವೇ ಸ್ವತಃ ಚುನಾವಣೆಗೆ ನಿಲ್ಲುವ ಬಗ್ಗೆ ಕೇಳಿದ ಪ್ರಶ್ನೆಗೆ, ಮುಂದೆ ನೋಡೋಣ, ಸದ್ಯಕ್ಕೆ ಜನರಿಗೆ ಅವಕಾಶ ಸಿಗಬೇಕು ಎಂದು ಉತ್ತರಿಸಿದರು.