ಮಾಸ್ಕೊ: ರಷ್ಯಾದ ಪೂರ್ವ ಭಾಗದ ಕುರಿಲ್ ದ್ವೀಪಗಳಲ್ಲಿ ಭಾನುವಾರ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಷ್ಯಾದ ತುರ್ತು ಸೇವೆಗಳ ಸಚಿವಾಲಯ ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ ಈ ಭೂಕಂಪ 7.0 ತೀವ್ರತೆ ದಾಖಲಿಸಿದ್ದು, ಸಣ್ಣ ಪ್ರಮಾಣದ ಸುನಾಮಿ ಅಲೆಗಳು ಕಾಣಿಸಿಕೊಂಡಿವೆ. ಕರಾವಳಿ ಪ್ರದೇಶಗಳಿಂದ ದೂರವಿರುವಂತೆ ಜನರಿಗೆ ಸೂಚನೆ ನೀಡಲಾಗಿದೆ.
ಕಮ್ಮಟ್ಕಾ ದೀಪಕಲ್ಪದ ಸಮೀಪದ ಮೂರು ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದ್ದು, ಸಮುದ್ರದ ಅಲೆಗಳ ಎತ್ತರ ಕಡಿಮೆಯಾಗಿದ್ದರೂ, ಜನರಿಗೆ ಸುರಕ್ಷಿತವಾಗಿರಲು ಎಚ್ಚರಿಕೆ ನೀಡಲಾಗಿದೆ. ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ (USGS) ಪ್ರಕಾರ, ಭೂಕಂಪದ ತೀವ್ರತೆ 7.0 ಆಗಿತ್ತು.
ಈ ಭೂಕಂಪದಿಂದಾಗಿ 600 ವರ್ಷಗಳಲ್ಲಿ ಮೊದಲ ಬಾರಿಗೆ ಕ್ರಶೆನಿನಿಕೋವ್ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು ಆರ್‌ಐಎ ಸ್ಟೇಟ್ ನ್ಯೂಸ್ ವರದಿ ಮಾಡಿದೆ. ಈ ಜ್ವಾಲಾಮುಖಿಯ ಸ್ಫೋಟವು ಲಾವಾ ಹರಿವು ಮತ್ತು ಬೂದಿ ಹರಡುವಿಕೆಯನ್ನು ಉಂಟುಮಾಡಿದೆ. ಆದಾಗ್ಯೂ, ಈ ಭೂಕಂಪದಿಂದ ಯಾವುದೇ ಪ್ರಬಲ ಸುನಾಮಿ ಎಚ್ಚರಿಕೆಯನ್ನು ಘೋಷಿಸಲಾಗಿಲ್ಲ.
ಇದಕ್ಕೂ ಮುಂಚೆ, ಜುಲೈ 30ರಂದು ರಷ್ಯಾದ ಪೂರ್ವ ಭಾಗದ ಕಮ್ಮಟ್ಕಾ ದೀಪಕಲ್ಪದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇದರಿಂದ ರಷ್ಯಾ, ಜಪಾನ್, ಹವಾಯಿ, ಅಮೆರಿಕದ ಪಶ್ಚಿಮ ಕರಾವಳಿ ಮತ್ತು ಫೆಸಿಫಿಕ್ ಸಾಗರದ ಇತರ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿತ್ತು. ಈ ಭೂಕಂಪದ ಬಳಿಕ ಕ್ಲ್ಯೂಚೆವ್ಸ್ಕಾಯ್ ಜ್ವಾಲಾಮುಖಿಯೂ ಸ್ಫೋಟಗೊಂಡಿತ್ತು.
ವಿಜ್ಞಾನಿಗಳ ಪ್ರಕಾರ, ಕುರಿಲ್ ದ್ವೀಪಗಳು ಮತ್ತು ಕಮ್ಮಟ್ಕಾ ಪ್ರದೇಶವು ಪೆಸಿಫಿಕ್ ರಿಂಗ್ ಆಫ್ ಫೈರ್‌ನ ಭಾಗವಾಗಿದ್ದು, ಇಲ್ಲಿ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು ಸಾಮಾನ್ಯ. ಮುಂದಿನ ಕೆಲವು ವಾರಗಳಲ್ಲಿ ಈ ಪ್ರದೇಶದಲ್ಲಿ ಮತ್ತಷ್ಟು ಭೂಕಂಪಗಳು ಸಂಭವಿಸುವ ಸಾಧ್ಯತೆಯ ಬಗ್ಗೆ ರಷ್ಯಾದ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.