ಲಂಡನ್: ಪಾಕಿಸ್ತಾನ ಎಂದರೆ ಜಗತ್ತಿನಾದ್ಯಂತ ಒಂದು ರೀತಿಯ ಅಸಹನೆಯ ಭಾವನೆ ಕಾಣಿಸಿಕೊಳ್ಳುತ್ತದೆ. ಭಯೋತ್ಪಾದನೆಯನ್ನು ರಫ್ತು ಮಾಡುವ ದೇಶ ಎಂಬ ಹಣೆಪಟ್ಟಿಯನ್ನು ಪಾಕಿಸ್ತಾನ ದಶಕಗಳಿಂದ ಹೊತ್ತಿದೆ. ಆದರೆ, ದೇಶದೊಳಗೆ ತನ್ನ ಸರ್ಕಾರದ ವಿರುದ್ಧ ಅಲ್ಲಿನ ಜನರೇ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಗೌರವವನ್ನು ತಾವೇ ಕಳೆದುಕೊಳ್ಳುವಂತಹ ಘಟನೆಗಳು ಆಗಾಗ ಜಗತ್ತಿನ ಗಮನ ಸೆಳೆಯುತ್ತಿವೆ. ಇದೀಗ, ಲಂಡನ್ನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಖ್ಯಾತ ಪತ್ರಕರ್ತರು ಕಿರಿಕ್ ಮಾಡಿಕೊಂಡಿರುವ ಘಟನೆಯೊಂದು ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಲಂಡನ್ನ ಪ್ರತಿಷ್ಠಿತ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಇಬ್ಬರು ಪತ್ರಕರ್ತರು ಸಫಿನಾ ಖಾನ್ ಮತ್ತು ಅಸಾದ್ ಅಲಿ ಮಲಿಕ್ ವರದಿಗಾರಿಕೆಗಾಗಿ ಆಗಮಿಸಿದ್ದರು. ಆದರೆ, ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ಏನೋ ಘರ್ಷಣೆ ಉಂಟಾಗಿ, ಬಾಯಿಗೆ ಬಂದಂತೆ ಬೈದಾಡಿಕೊಂಡಿದ್ದಾರೆ. ವಿಶೇಷವಾಗಿ, ಸಫಿನಾ ಖಾನ್ ಅವರು ಅಸಾದ್ ಅಲಿ ಮಲಿಕ್ರನ್ನು ‘ಹಂದಿಗೆ ಹುಟ್ಟಿದವನು’ ಎಂದು ಕಟುವಾಗಿ ಟೀಕಿಸಿದ್ದಾರೆ ಎಂಬ ವಿಷಯ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಫಿನಾ ಖಾನ್ ತಮ್ಮ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ARY ನ್ಯೂಸ್ ಚಾನೆಲ್ನ ಫರೀದ್ ಮತ್ತು ಹಮ್ ನ್ಯೂಸ್ ಚಾನೆಲ್ನ ರಫೀಕ್ ನನ್ನನ್ನು ನಿಂದಿಸಿದ್ದಾರೆ. ಅವರು ನನಗೆ ಬೆದರಿಕೆ ಒಡ್ಡಿದ್ದಾರೆ. ಈ ವೇಳೆ ಅಸಾದ್ ಅಲಿ ಮಲಿಕ್ ಮಧ್ಯಪ್ರವೇಶಿಸಿ, ‘ನಿನ್ನನ್ನು ಕೊಲ್ಲುತ್ತೇನೆ’ ಎಂದು ಧಮ್ಕಿ ಹಾಕಿದ್ದಾರೆ. ನನಗೆ ಏನಾದರೂ ಆದರೆ, ಈ ಇಬ್ಬರೇ ಕಾರಣವಾಗಿರುತ್ತಾರೆ,” ಎಂದು ಸಫಿನಾ ಖಾನ್ ಆರೋಪಿಸಿದ್ದಾರೆ. ಈ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ, ಅಸಾದ್ ಅಲಿ ಮಲಿಕ್ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ಸಫಿನಾ ಖಾನ್ರ ಎಲ್ಲಾ ಆರೋಪಗಳು ಸುಳ್ಳು. ಅವರು ನನ್ನ ವಿರುದ್ಧ ಆಧಾರರಹಿತವಾಗಿ ದೂರು ತಂದಿದ್ದಾರೆ. ಇದರ ಹಿಂದೆ ಯಾವುದೋ ಒಳಸಂಚು ಇರಬಹುದು,” ಎಂದು ಅವರು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ಇಬ್ಬರ ನಡುವಿನ ವೈಮನಸ್ಸು ತಾರಕಕ್ಕೇರಿದ್ದು, ಇದು ಕಾನೂನು ಕದನಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.