ಘಾನಾದಿಂದ ಮೋದಿಗೆ ‘ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ ಗೌರವ

ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

Untitled design (44)

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಘಾನಾ ದೇಶದ ಉನ್ನತ ರಾಷ್ಟ್ರೀಯ ಗೌರವವಾದ ‘ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ. ಐದು ದೇಶಗಳ ಪ್ರವಾಸದ ಭಾಗವಾಗಿ, ಪ್ರಧಾನಿ ಮೋದಿಯವರು ಮೊದಲಿಗೆ ಘಾನಾಕ್ಕೆ ಭೇಟಿ ನೀಡಿದ್ದಾರೆ. ಇದು 30 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರಿಂದ ಘಾನಾಕ್ಕೆ ನೀಡಿದ ಮೊದಲ ಭೇಟಿಯಾಗಿದೆ.

ಈ ಸಂದರ್ಭದಲ್ಲಿ, ಘಾನಾದ ಅಧ್ಯಕ್ಷ ಜಾನ್ ಡ್ರಾಮಣಿ ಮಹಾಮ ಅವರು ಪ್ರಧಾನಿ ಮೋದಿಯವರನ್ನು ಜಾಗತಿಕ ಮಟ್ಟದಲ್ಲಿ ಪ್ರಭಾವಶಾಲಿ ನಾಯಕ ಎಂದು ಗುರುತಿಸಿ, ಈ ರಾಷ್ಟ್ರೀಯ ಗೌರವವನ್ನು ಪ್ರದಾನ ಮಾಡಿದ್ದಾರೆ. ಪ್ರಶಸ್ತಿಯನ್ನು ಸ್ವೀಕರಿಸಿದ ಮೋದಿ, ಈ ಗೌರವ ಕೇವಲ ತಮ್ಮ ವೈಯಕ್ತಿಕ ಸಾಧನೆಯಲ್ಲ, ಬದಲಿಗೆ 140 ಕೋಟಿ ಭಾರತೀಯರ ಸಾಮೂಹಿಕ ಶ್ರಮದ ಫಲ ಎಂದು ಹೇಳಿದ್ದಾರೆ.

“ಈ ಪ್ರಶಸ್ತಿಯನ್ನು ನಾನು ಭಾರತದ ಯುವಜನತೆಗೆ ಅರ್ಪಿಸುತ್ತೇನೆ. ಇದು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ,” ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಮೋದಿಯವರು, ಘಾನಾದ ಈ ಗೌರವಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

Exit mobile version