ಬಾಂಗ್ಲಾ ಚುನಾವಣೆಯಲ್ಲಿ ಬಿಎನ್‌ಪಿ ಭರ್ಜರಿ ಗೆಲುವು: ತಾರಿಕ್ ರೆಹಮಾನ್‌ಗೆ ಪ್ರಧಾನಿ ಮೋದಿ ಅಭಿನಂದನೆ

Untitled design 2026 02 13T172025.495

ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಭರ್ಜರಿ ಗೆಲುವು ಸಾಧಿಸಿದ್ದು, ಪಕ್ಷದ ಮುಖ್ಯಸ್ಥ ತಾರಿಕ್ ರೆಹಮಾನ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ  ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ತಾರಿಕ್ ರೆಹಮಾನ್ ಅವರೊಂದಿಗೆ ಮಾತನಾಡಲು ಸಂತೋಷವಾಯಿತು ಎಂದು ತಿಳಿಸಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಜನಆಕಾಂಕ್ಷೆಗಳ ಈಡೇರಿಕೆಗೆ ಭಾರತ ಸದಾ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.

“ಬಾಂಗ್ಲಾದೇಶದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಾರಿಕ್ ರೆಹಮಾನ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸಲು ನಿಮ್ಮ ಪ್ರಯತ್ನಗಳಿಗೆ ನನ್ನ ಶುಭಹಾರೈಕೆಗಳು ಹಾಗೂ ಸಂಪೂರ್ಣ ಬೆಂಬಲ,” ಎಂದು ಮೋದಿ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂದರ್ಭದಲ್ಲಿ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಮೋದಿ ಪುನರುಚ್ಚರಿಸಿದ್ದಾರೆ. ಇಬ್ಬರೂ ಆಪ್ತ ನೆರೆಹೊರೆಯ ರಾಷ್ಟ್ರಗಳಾಗಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿ ಸಾಧಿಸಲು ಪರಸ್ಪರ ಸಹಕಾರ ಅತ್ಯವಶ್ಯಕ ಎಂದು ಅವರು ಹೇಳಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವತ್ತ ತಮ್ಮ ಬದ್ಧತೆಯನ್ನು ಕೂಡ ಮೋದಿ ವ್ಯಕ್ತಪಡಿಸಿದ್ದಾರೆ.

ತಾರಿಕ್ ರೆಹಮಾನ್ ಅವರು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರಾಗಿದ್ದು, ದೀರ್ಘಕಾಲದ ಬಳಿಕ ನಡೆದ ಈ ಚುನಾವಣೆಯಲ್ಲಿ ಪಕ್ಷವನ್ನು ನಿರ್ಣಾಯಕ ಗೆಲುವಿನತ್ತ ಮುನ್ನಡೆಸಿದ್ದಾರೆ.

ಈ ಚುನಾವಣೆ ವಿಶೇಷ ಮಹತ್ವ ಹೊಂದಿದ್ದು, ಮಾಜಿ ಪ್ರಧಾನಿ ಶೇಕ್‌ ಹಸಿನಾ ಅವರ ಆಡಳಿತ ಕುಸಿತದ ಬಳಿಕ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ರಾಜಕೀಯ ಅಸ್ಥಿರತೆ ಅನುಭವಿಸಿದ್ದ ಬಾಂಗ್ಲಾದೇಶದಲ್ಲಿ ಈ ಫಲಿತಾಂಶ ಹೊಸ ರಾಜಕೀಯ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಬಿಎನ್‌ಪಿ ಪಕ್ಷದ ಅಭೂತಪೂರ್ವ ಬಹುಮತದಿಂದಾಗಿ ದೇಶದಲ್ಲಿ ಆಡಳಿತ ಬದಲಾವಣೆಗೆ ದಾರಿ ತೆರೆದಿದ್ದು, ಜನರು ಪರಿವರ್ತನೆಯತ್ತ ಮತ ನೀಡಿದ್ದಾರೆ ಎಂಬ ಸಂದೇಶ ಸ್ಪಷ್ಟವಾಗಿದೆ.

ಪ್ರಧಾನಿ ಮೋದಿ ಅವರು ತಮ್ಮ ಸಂದೇಶದಲ್ಲಿ “ಪ್ರಜಾಸತ್ತಾತ್ಮಕ, ಪ್ರಗತಿಪರ ಮತ್ತು ಎಲ್ಲರನ್ನು ಒಳಗೊಂಡ ಬಾಂಗ್ಲಾದೇಶವನ್ನು ಬೆಂಬಲಿಸುವುದನ್ನು ಭಾರತ ಮುಂದುವರಿಸುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಉಭಯ ದೇಶಗಳ ಸಾಮಾನ್ಯ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ತಾರಿಕ್ ರೆಹಮಾನ್ ಅವರೊಂದಿಗೆ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Exit mobile version