ಗಾಯಕಿ ಅಲೆಕ್ಸಿಸ್ ವಿಲ್ಕಿನ್ಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್

Untitled design 2026 10 05T130537.941

ನ್ಯೂಯಾರ್ಕ್, ಅಕ್ಟೋಬರ್ 5: ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ನಿರ್ದೇಶಕ ಕಾಶ್ ಪಟೇಲ್ ಅವರು ಗಾಯಕಿ ಹಾಗೂ ರಾಜಕೀಯ ವ್ಯಾಖ್ಯಾನಕಾರ್ತಿ ಅಲೆಕ್ಸಿಸ್ ವಿಲ್ಕಿನ್ಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಲೆಕ್ಸಿಸ್ ಹಂಚಿಕೊಂಡಿರುವ ಪೋಸ್ಟ್ ಇದೀಗ ವ್ಯಾಪಕ ಗಮನ ಸೆಳೆದಿದ್ದು, ಕಾಶ್ ಪಟೇಲ್ ಕೂಡ ಅದನ್ನು ಮರುಹಂಚಿಕೊಂಡಿದ್ದಾರೆ.

27 ವರ್ಷದ ಅಲೆಕ್ಸಿಸ್ ವಿಲ್ಕಿನ್ಸ್ ಅವರು ಕಾಶ್ ಪಟೇಲ್ ಅವರೊಂದಿಗಿನ ಕಪ್ಪು-ಬಿಳುಪು ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಪ್ರದರ್ಶಿಸಿದ್ದಾರೆ. “Went and got the law involved” ಎಂಬ ಹಾಸ್ಯಮಯ ಶೀರ್ಷಿಕೆಯೊಂದಿಗೆ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಕಾಶ್ ಪಟೇಲ್ ಕೂಡ ಈ ಪೋಸ್ಟ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮರುಹಂಚಿಕೊಂಡಿದ್ದಾರೆ.

ಕಾಶ್ ಪಟೇಲ್ ಅವರಿಗೆ 46 ವರ್ಷ. ಭಾರತೀಯ ಮೂಲದ ಅಮೆರಿಕನ್ ಆಗಿರುವ ಅವರು ಎಫ್‌ಬಿಐನ ಉನ್ನತ ಹುದ್ದೆ ಅಲಂಕರಿಸಿರುವ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಅವರ ಪೋಷಕರು ಮೂಲತಃ ಗುಜರಾತ್‌ನವರಾಗಿದ್ದು, ಬಳಿಕ ಅಮೆರಿಕಕ್ಕೆ ವಲಸೆ ಹೋಗಿದ್ದರು. 2025ರಲ್ಲಿ ಎಫ್‌ಬಿಐ ನಿರ್ದೇಶಕರಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಪಟೇಲ್ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ್ದರು.

ಯಾರು ಈ ಕಾಶ್ ಪಟೇಲ್?

ವೃತ್ತಿಯಿಂದ ವಕೀಲರಾಗಿರುವ ಕಾಶ್ ಪಟೇಲ್ ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಈ ಹಿಂದೆ ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯಸ್ಥರ ಸಿಬ್ಬಂದಿ ಮುಖ್ಯಸ್ಥರಾಗಿ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಎಫ್‌ಬಿಐ ನಿರ್ದೇಶಕರಾದ ಬಳಿಕ ಅವರ ಅಧಿಕೃತ ಚಟುವಟಿಕೆಗಳ ಜತೆಗೆ ವೈಯಕ್ತಿಕ ಜೀವನವೂ ಹಲವು ಸಂದರ್ಭಗಳಲ್ಲಿ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಸರ್ಕಾರಿ ವಿಮಾನದ ಬಳಕೆಗೆ ಸಂಬಂಧಿಸಿದಂತೆ ಈ ಹಿಂದೆ ಪ್ರಶ್ನೆಗಳು ಮತ್ತು ಟೀಕೆಗಳು ವ್ಯಕ್ತವಾಗಿದ್ದವು.

ಯಾರು ಅಲೆಕ್ಸಿಸ್ ವಿಲ್ಕಿನ್ಸ್?

ಅಲೆಕ್ಸಿಸ್ ವಿಲ್ಕಿನ್ಸ್ ಅಮೆರಿಕದ ಗಾಯಕಿ ಮಾತ್ರವಲ್ಲದೆ ರಾಜಕೀಯ ವ್ಯಾಖ್ಯಾನಕಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಂಗೀತ ಕ್ಷೇತ್ರದ ಜತೆಗೆ ಸಂಪ್ರದಾಯವಾದಿ ರಾಜಕೀಯ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯವಾಗಿ ಕಾಣಿಸಿಕೊಂಡಿದ್ದಾರೆ.

2023ರಲ್ಲಿ ಅವರು ತಮ್ಮ ಮೊದಲ ಸಂಗೀತ ಆಲ್ಬಂ ಬಿಡುಗಡೆ ಮಾಡಿದ್ದರು. ಅಮೆರಿಕದ ರಾಜಕೀಯ ಕಾರ್ಯಕ್ರಮಗಳಲ್ಲಿಯೂ ಅವರು ಸಂಗೀತ ಪ್ರದರ್ಶನ ನೀಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಲವು ಕಾರ್ಯಕ್ರಮಗಳಲ್ಲಿ ಅವರು ಪ್ರದರ್ಶನ ನೀಡಿರುವುದಾಗಿ ವರದಿಯಾಗಿದೆ. ಇತ್ತೀಚೆಗೆ ನಡೆದ ‘Great American State Fair’ ಕಾರ್ಯಕ್ರಮದಲ್ಲೂ ಅವರು ಪ್ರದರ್ಶನ ನೀಡಿದ್ದರು.

2022ರಲ್ಲಿ ಮೊದಲ ಭೇಟಿ?

ಕಾಶ್ ಪಟೇಲ್ ಮತ್ತು ಅಲೆಕ್ಸಿಸ್ ವಿಲ್ಕಿನ್ಸ್ 2022ರಲ್ಲಿ ನ್ಯಾಶ್‌ವಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು ಎಂದು ವರದಿಯಾಗಿದೆ. ಬಳಿಕ 2023ರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು. 2025ರಲ್ಲಿ ಕಾಶ್ ಪಟೇಲ್ ಎಫ್‌ಬಿಐ ನಿರ್ದೇಶಕರಾಗಿ ಪ್ರಮಾಣವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲೂ ಅಲೆಕ್ಸಿಸ್ ಭಾಗವಹಿಸಿದ್ದರು.

ಇವರಿಬ್ಬರ ಸಂಬಂಧಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವು ಸುದ್ದಿಗಳು ಹರಿದಾಡಿದ್ದರೂ, ಇದೀಗ ನಿಶ್ಚಿತಾರ್ಥದ ಅಧಿಕೃತ ಘೋಷಣೆಯೊಂದಿಗೆ ಈ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ.

 

Exit mobile version