ದುಬೈ, ಅಕ್ಟೋಬರ್ 5: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಭೀಕರ ದಾಳಿ ಪ್ರಕರಣ ಇದೀಗ ಮತ್ತಷ್ಟು ಆತಂಕಕಾರಿ ತಿರುವು ಪಡೆದುಕೊಂಡಿದೆ. ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ದಾಳಿ ನಡೆಸಿದ ಪ್ರಕರಣದ ತನಿಖೆಯಲ್ಲಿ, ವಿಮಾನವನ್ನು ಇಸ್ರೇಲ್ ನೆಲಕ್ಕೆ ಅಪ್ಪಳಿಸುವ ಉದ್ದೇಶ ಹೊಂದಿದ್ದ ಎನ್ನಲಾದ ಆಘಾತಕಾರಿ ಅಂಶಗಳು ಬಹಿರಂಗವಾಗಿವೆ.
‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಪ್ರಕಾರ, ಸೌದಿ ಅರೇಬಿಯಾ ಮತ್ತು ಯುಎಇ ತನಿಖಾಧಿಕಾರಿಗಳ ವಿಚಾರಣೆ ವೇಳೆ ಹಮ್ಮಾಮಿ ತನ್ನ ಉದ್ದೇಶದ ಬಗ್ಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಸಾವಿಗೆ ಹೆದರಿರಲಿಲ್ಲ ಮತ್ತು ವಿಮಾನವನ್ನು ಇಸ್ರೇಲ್ ನೆಲಕ್ಕೆ ಅಪ್ಪಳಿಸಿ ದೊಡ್ಡ ದುರಂತ ಸೃಷ್ಟಿಸುವ ಗುರಿ ಹೊಂದಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಪ್ರಾರ್ಥನೆಯ ನೆಪದಲ್ಲಿ ಕೊಡಲಿಯಿಂದ ದಾಳಿ
ವಿಮಾನ ಹಾರಾಟದಲ್ಲಿದ್ದ ಸಂದರ್ಭದಲ್ಲಿ ಹಮ್ಮಾಮಿ ಪ್ರಾರ್ಥನೆ ಮಾಡಲು ಅನುಮತಿ ಕೇಳಿದ್ದ. ಇದಕ್ಕೆ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಒಪ್ಪಿಗೆ ನೀಡಿದ ಬಳಿಕ, ಕಾಕ್‌ಪಿಟ್‌ನಲ್ಲಿ ಇರಿಸಲಾಗಿದ್ದ ಕೊಡಲಿಯನ್ನು ತೆಗೆದುಕೊಂಡು ಅವರ ತಲೆಯ ಹಿಂಭಾಗಕ್ಕೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಮೊದಲಿಗೆ ವಿಮಾನದಲ್ಲೇ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಭಾವಿಸಿದ್ದ ಸ್ಮಿತ್‌ಗೆ ಸತತ ಹೊಡೆತಗಳು ಬಿದ್ದ ಬಳಿಕ ತಮ್ಮ ಪಕ್ಕದಲ್ಲಿದ್ದ ಸಹ-ಪೈಲಟ್‌ನೇ ದಾಳಿ ನಡೆಸುತ್ತಿರುವುದು ಅರಿವಾಗಿದೆ. ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೂ ಸ್ಮಿತ್ ಧೈರ್ಯ ಕಳೆದುಕೊಳ್ಳದೆ ಕಾಕ್‌ಪಿಟ್ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಅಂತಿಮವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್
ಸಹ-ಪೈಲಟ್‌ನ ದಾಳಿಯ ನಡುವೆಯೂ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತೋರಿದ ಧೈರ್ಯದಿಂದ ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವ ಉಳಿದಿದೆ ಎಂದು ವರದಿಯಾಗಿದೆ. ಸ್ಮಿತ್ ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಮಿತ್ ಅವರೊಂದಿಗೆ ಮಾತನಾಡಿ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮುಂಬರುವ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಮುಖ್ಯ ಗೌರವ ಅತಿಥಿಯಾಗಿ ಭಾಗವಹಿಸುವಂತೆ ಆಹ್ವಾನಿಸಿರುವುದಾಗಿ ವರದಿಯಾಗಿದೆ.
ಹಮ್ಮಾಮಿಗೆ ಸಿರಿಯಾ ಲಿಂಕ್?
ತನಿಖೆಯಲ್ಲಿ ಹಮ್ಮಾಮಿಯ ಹಿನ್ನೆಲೆಯೂ ಪರಿಶೀಲನೆಗೆ ಒಳಪಟ್ಟಿದೆ. ಆತ ಓಮನ್ ಪ್ರಜೆಯಾಗಿದ್ದರೂ, ಆತನ ತಾಯಿ ಸಿರಿಯಾ ಮೂಲದವರು ಮತ್ತು ಹಮ್ಮಾಮಿ ತನ್ನ ಜೀವನದ ಹೆಚ್ಚಿನ ಸಮಯವನ್ನು ಸಿರಿಯಾದಲ್ಲಿ ಕಳೆದಿದ್ದ ಎನ್ನಲಾಗಿದೆ. ಅಲ್ಲಿಯೇ ಆತ ತೀವ್ರಗಾಮಿ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದ ಎಂಬ ಆರೋಪವೂ ಕೇಳಿಬಂದಿದೆ.
ಇದಕ್ಕೂ ಮುನ್ನ 2024ರಲ್ಲಿ ‘ಓಮನ್ ಏರ್’ನಲ್ಲಿ ಸಹ-ಪೈಲಟ್ ಆಗಿದ್ದ ಸಂದರ್ಭದಲ್ಲಿ ಹಮ್ಮಾಮಿ ಬಳಿ ಉಗ್ರಗಾಮಿ ಸಾಹಿತ್ಯ ಮತ್ತು ಇತರ ಸಾಮಗ್ರಿಗಳು ಪತ್ತೆಯಾಗಿದ್ದವು ಎನ್ನಲಾಗಿದೆ. ಈ ಹಿನ್ನೆಲೆ ಆತನಿಗೆ ಓಮನ್‌ನಲ್ಲಿ ಹಾರಾಟ ನಡೆಸದಂತೆ ನಿರ್ಬಂಧ ವಿಧಿಸಲಾಗಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಉಲ್ಲೇಖವಾಗಿದೆ.
ಹಮ್ಮಾಮಿಗೆ ಓಮನ್‌ನಲ್ಲಿ ಹಾರಾಟ ನಿರ್ಬಂಧವಿದ್ದರೂ ಆತ ಫ್ಲೈದುಬೈನಲ್ಲಿ ಹೇಗೆ ಕೆಲಸಕ್ಕೆ ಸೇರಿದ? ಇಸ್ರೇಲ್‌ನಂತಹ ಅತ್ಯಂತ ಸೂಕ್ಷ್ಮ ಮಾರ್ಗದಲ್ಲಿ ಸಂಚರಿಸುವ ವಿಮಾನಕ್ಕೆ ಆತನನ್ನು ಹೇಗೆ ನಿಯೋಜಿಸಲಾಯಿತು? ಎಂಬ ಪ್ರಶ್ನೆಗಳು ಎದ್ದಿದೆ. ಯುಎಇ ಭದ್ರತಾ ಸಂಸ್ಥೆಗಳು ಮತ್ತು ಇಸ್ರೇಲಿ ಅಧಿಕಾರಿಗಳು ಈ ಆಯಾಮಗಳ ಕುರಿತು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
