ಪೈಪ್‌ಲೈನ್ ದುರಸ್ತಿಗೆ ಬರೋಬ್ಬರಿ 21 ಕೆಜಿ ಚಿನ್ನ ದಾನ ಮಾಡಿದ ಜಪಾನ್‌ ಪ್ರಜೆ!

Untitled design 2026 02 25T114050.852

ಸಾಮಾನ್ಯವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ದಾನ ಎಂದರೆ ಭಾರತದ ಶ್ರೀಮಂತ ದೇವಸ್ಥಾನಗಳು ನೆನಪಿಗೆ ಬರುತ್ತವೆ. ಆದರೆ ಇಲ್ಲಿ ಒಬ್ಬ ಅನಾಮಧೇಯ ನಾಗರಿಕ ತನ್ನ ನಗರದ ಮೂಲಭೂತ ಸೌಕರ್ಯ ಸುಧಾರಣೆಗಾಗಿ ಬರೋಬ್ಬರಿ 21 ಕಿಲೋಗ್ರಾಂ ಚಿನ್ನದ ಬಾರ್‌ಗಳನ್ನು ದಾನ ಮಾಡಿದ್ದಾರೆ. ಇದರ ಮೌಲ್ಯ ಸುಮಾರು 560 ಮಿಲಿಯನ್ ಯೆನ್ (ಅಂದಾಜು $3.6 ಮಿಲಿಯನ್ ಅಥವಾ ಭಾರತೀಯ ರೂಪಾಯಿಯಲ್ಲಿ ಸುಮಾರು 30-32 ಕೋಟಿ ರೂಪಾಯಿ) ಆಗಿದೆ.

ಈ ಅನಾಮಿಕ ದಾನಿಗಳು ಒಸಾಕಾ ಸಿಟಿ ವಾಟರ್‌ವರ್ಕ್ಸ್ ಬ್ಯೂರೋಗೆ (ನಗರ ನೀರು ಸರಬರಾಜು ಇಲಾಖೆ) 2025ರ ನವೆಂಬರ್‌ನಲ್ಲಿ ಈ ಚಿನ್ನದ ಬಾರ್‌ಗಳನ್ನು ಕಳುಹಿಸಿದ್ದರು. ಅವರೊಂದಿಗೆ ಬಂದ ಪತ್ರದಲ್ಲಿ, ನಗರದ ಹಳೆಯದಾದ ನೀರು ಸರಬರಾಜು ಪೈಪ್‌ಲೈನ್‌ಗಳು ಮತ್ತು ಚರಂಡಿ ವ್ಯವಸ್ಥೆಯ ದುರಸ್ತಿ ಮತ್ತು ನವೀಕರಣಕ್ಕೆ ಈ ಹಣವನ್ನು ಬಳಸಿ ಎಂದು ಮನವಿ ಮಾಡಲಾಗಿತ್ತು. ದಾನಿಗಳು ತಮ್ಮ ಹೆಸರು ಅಥವಾ ಗುರುತನ್ನು ಯಾವುದೇ ರೀತಿ ಬಹಿರಂಗಪಡಿಸಬಾರದು ಎಂದು ಒತ್ತಾಯಿಸಿದ್ದರು. ಇದರಿಂದಾಗಿ ಶುಕ್ರವಾರ (2026ರ ಫೆಬ್ರವರಿ 19) ನಡೆದ ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಹಿದೆಯುಕಿ ಯೊಕೊಯಾಮಾ ಈ ವಿವರಗಳನ್ನು ಹಂಚಿಕೊಂಡರು.

ದಾನಿಗಳು ಮಾಧ್ಯಮಗಳಲ್ಲಿ ನಗರದಲ್ಲಿ ಪದೇ ಪದೇ ನೀರು ಪೈಪ್‌ಗಳು ಒಡೆದು ನೀರು ಪೋಲಾಗುವ, ರಸ್ತೆಗಳಲ್ಲಿ ಲೀಕೇಜ್ ಆಗುವ ಮತ್ತು ಸಿಂಕ್‌ಹೋಲ್‌ಗಳು ಉಂಟಾಗುವ ಸುದ್ದಿಗಳನ್ನು ನೋಡಿ ಆತಂಕಗೊಂಡಿದ್ದರು. 2024ರಲ್ಲಿ ಮಾತ್ರ 92ಕ್ಕೂ ಹೆಚ್ಚು ಲೀಕೇಜ್ ಘಟನೆಗಳು ದಾಖಲಾಗಿವೆ ಎಂದು ನಗರ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಪ್ರೇರಿತರಾಗಿ ಅವರು ಮೊದಲು 2025ರ ಅಕ್ಟೋಬರ್‌ನಲ್ಲಿ 500,000 ಯೆನ್ (ಸುಮಾರು 2.5-3 ಲಕ್ಷ ರೂಪಾಯಿ) ನಗದು ದಾನ ಮಾಡಿದ್ದರು. ನಂತರ ಒಂದು ತಿಂಗಳ ನಂತರ ಈ ದೊಡ್ಡ ಚಿನ್ನದ ದಾನ ನೀಡಿದ್ದಾರೆ.

ಈ ಬಗ್ಗೆ ಒಸಾಕಾ ಮೇಯರ್ ಹಿದೆಯುಕಿ ಯೊಕೊಯಾಮಾ ಮಾತನಾಡುತ್ತಾ, ಇಷ್ಟೊಂದು ದೊಡ್ಡ ಮೊತ್ತ ನೋಡಿ ನನಗೆ ಮಾತೇ ಹೊರಡಲಿಲ್ಲ. ನಗರದ ನೀರು ಪೈಪ್‌ಗಳ ಹಳೆಯಾಗುವ ಸಮಸ್ಯೆಗೆ ದೊಡ್ಡ ಹೂಡಿಕೆ ಬೇಕು. ಈ ದಾನದಿಂದ ಅಪಾರ ಶಕ್ತಿ ಸಿಕ್ಕಿದೆ. ದಾನಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಅವರು ಹೇಳಿದರು. ನಗರದ 28 ಲಕ್ಷ ಜನಸಂಖ್ಯೆಗೆ ಸುರಕ್ಷಿತ ನೀರು ಸರಬರಾಜು ಮಾಡುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.

ಈ ಚಿನ್ನವನ್ನು ನಗದಾಗಿ ಪರಿವರ್ತಿಸಿ, ಸುಮಾರು 2 ಕಿಲೋಮೀಟರ್ (ಸುಮಾರು 1.2 ಮೈಲಿ) ಉದ್ದದ ಹಳೆಯ ಪೈಪ್‌ಲೈನ್‌ಗಳನ್ನು ಬದಲಾಯಿಸಲು ಬಳಸಲಾಗುತ್ತದೆ ಎಂದು ನಗರ ಅಧಿಕಾರಿಗಳು ತಿಳಿಸಿದ್ದಾರೆ. ಕೆಲಸಗಳು ಶೀಘ್ರದಲ್ಲೇ ಆರಂಭವಾಗಲಿವೆ. ದಾನಿಯ ಇಚ್ಛೆಗೆ ಅನುಗುಣವಾಗಿ ಈ ಹಣವನ್ನು ಸಂಪೂರ್ಣವಾಗಿ ನೀರು ಸರಬರಾಜು ವ್ಯವಸ್ಥೆಗೆ ಮಾತ್ರ ಬಳಸಲಾಗುವುದು ಎಂದು ಭರವಸೆ ನೀಡಲಾಗಿದೆ.

ಭಾರತದಲ್ಲಿ 2022ರಲ್ಲಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 60 ಕೆಜಿ ಚಿನ್ನದ ದಾನ ಬಂದ ಉದಾಹರಣೆ ಇದೆ. ಆದರೆ ಧಾರ್ಮಿಕ ಕೇಂದ್ರಗಳಿಗಿಂತ ಮಿಗಿಲಾಗಿ ಸಾರ್ವಜನಿಕ ಮೂಲಸೌಕರ್ಯಕ್ಕಾಗಿ ಇಷ್ಟೊಂದು ದೊಡ್ಡ ಮೊತ್ತದ ಚಿನ್ನ ದಾನ ಮಾಡಿರುವುದು ಅತ್ಯಂತ ಅಪರೂಪ ಮತ್ತು ಪ್ರೇರಣಾದಾಯಕ. ಇದು ನಾಗರಿಕ ಜವಾಬ್ದಾರಿ, ಸಮಾಜಸೇವೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಅತ್ಯುನ್ನತ ಉದಾಹರಣೆಯಾಗಿದೆ.

Exit mobile version