ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್ಆರ್) ಮತ್ತು ಕೆನಡಾದ ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ವೈವಿಆರ್) ನಡುವೆ ಐತಿಹಾಸಿಕ ‘ಸಿಸ್ಟರ್ ಏರ್ಪೋರ್ಟ್’ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಪಶ್ಚಿಮ ಕೆನಡಾ ಮತ್ತು ದಕ್ಷಿಣ ಭಾರತದ ನಡುವೆ ಕಾರ್ಯಾಚರಣೆ, ತಂತ್ರಜ್ಞಾನ, ಆರ್ಥಿಕತೆ ಮತ್ತು ವಿಮಾನಯಾನ ಸೇವೆಯನ್ನು ಅಭಿವೃದ್ಧಿಪಡಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2 ರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆನಡಾದ ಅಂತಾರಾಷ್ಟ್ರೀಯ ವ್ಯಾಪಾರ ಸಚಿವ ಮಣಿಂದರ್ ಸಿಧು, ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಕ್ರಿಸ್ ಕೂಟರ್, ಕಾನ್ಸುಲ್ ಜನರಲ್ ರಿಯಾನ್ ವಾರ್ಡ್ ಹಾಗೂ ಎರಡೂ ವಿಮಾನ ನಿಲ್ದಾಣಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಒಪ್ಪಂದವು ಪ್ರಮುಖವಾಗಿ ಏಳು ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಗುರಿಯನ್ನು ಹೊಂದಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸುಲಭಗೊಳಿಸಲು ‘ಡಿಜಿಟಲ್ ಟ್ವಿನ್’ನಂತಹ ನವೀನ ತಂತ್ರಜ್ಞಾನಗಳ ಬಳಕೆ, ತಂತ್ರಜ್ಞಾನ ಹಂಚಿಕೆ ಹಾಗೂ ಹೊಸ ಆವಿಷ್ಕಾರಗಳ ಜಂಟಿ ಪ್ರಯೋಗವನ್ನು ಇದು ಒಳಗೊಂಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಬೆಂಗಳೂರು ಮತ್ತು ವ್ಯಾಂಕೋವರ್ ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸಲು ಈ ಒಪ್ಪಂದವು ಭದ್ರ ಬುನಾದಿ ಹಾಕಿದೆ. ಇದರ ಜೊತೆಗೆ, ಉಭಯ ದೇಶಗಳ ಟೆಕ್ ವಲಯ ಸೇರಿದಂತೆ ವಿವಿಧ ಉದ್ಯಮಗಳ ಬೆಳವಣಿಗೆಗೆ ಪೂರಕವಾಗಿ ದಕ್ಷಿಣ ಭಾರತ ಮತ್ತು ಕೆನಡಾ ನಡುವೆ ಸರಕು ಸಾಗಣೆ ವಹಿವಾಟನ್ನು ಹೆಚ್ಚಿಸುವ ಉದ್ದೇಶವನ್ನೂ ಹೊಂದಲಾಗಿದೆ.
ಈ ಕುರಿತು ಮಾತನಾಡಿದ ಕೆನಡಾದ ಸಚಿವ ಮಣಿಂದರ್ ಸಿಧು, “ಭಾರತದಂತಹ ಮಿತ್ರ ರಾಷ್ಟ್ರಗಳೊಂದಿಗೆ ಕೆನಡಾದ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವ ಯತ್ನಗಳು ಅತ್ಯುತ್ತಮ ಫಲಿತಾಂಶ ನೀಡುತ್ತಿವೆ,” ಎಂದರು. ಈ ಒಪ್ಪಂದವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯೊಂದಿಗೆ ನೇರ ವಿಮಾನಯಾನ ಸೇವೆ ಆರಂಭಿಸಲು ನಾಂದಿ ಹಾಡಿದ್ದು, ಬೃಹತ್ ಹೂಡಿಕೆ ಹಾಗೂ ವ್ಯಾಪಾರ ವೃದ್ಧಿಗೆ ಕಾರಣವಾಗಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್) ಸಿಒಒ ಗಿರೀಶ್ ನಾಯರ್ ಮಾತನಾಡಿ, “ಈ ಕಾರ್ಯತಂತ್ರದ ಪಾಲುದಾರಿಕೆಯು ತಂತ್ರಜ್ಞಾನದ ಏಕೀಕರಣಕ್ಕೆ ಭದ್ರ ಚೌಕಟ್ಟನ್ನು ಒದಗಿಸಲಿದೆ. ಸ್ಮಾರ್ಟ್ ಏರ್ಪೋರ್ಟ್ ತಂತ್ರಜ್ಞಾನ, ಸುಸ್ಥಿರ ಕಾರ್ಯಾಚರಣೆ ಮತ್ತು ಪ್ರಯಾಣಿಕರಿಗೆ ಜಾಗತಿಕ ಮಟ್ಟದ ಅತ್ಯುತ್ತಮ ಅನುಭವ ನೀಡುವ ನಿಟ್ಟಿನಲ್ಲಿ ಎರಡೂ ವಿಮಾನ ನಿಲ್ದಾಣಗಳು ಒಟ್ಟಾಗಿ ಕೆಲಸ ಮಾಡಲಿವೆ,” ಎಂದು ವಿವರಿಸಿದರು.
ವ್ಯಾಪಾರ ಮತ್ತು ಬಾಂಧವ್ಯ ವೃದ್ಧಿ
2025ರಲ್ಲಿ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ವ್ಯಾಪಾರ ಬರೋಬ್ಬರಿ 10.9 ಬಿಲಿಯನ್ ಡಾಲರ್ ತಲುಪಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಭಾರತೀಯರಿದ್ದು, ಇದು ಆ ಪ್ರಾಂತ್ಯದ ಒಟ್ಟು ಜನಸಂಖ್ಯೆಯ ಶೇ. 10ರಷ್ಟಿದೆ. ಇತ್ತ ಬೆಂಗಳೂರು ಕೂಡ ಟೆಕ್ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಈ ಒಪ್ಪಂದವು ಭವಿಷ್ಯದಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
ಕಳೆದ ವರ್ಷ (2025) ಬೆಂಗಳೂರು ವಿಮಾನ ನಿಲ್ದಾಣದ ಮೂಲಕ 4.44 ಕೋಟಿ ಪ್ರಯಾಣಿಕರು ಸಂಚರಿಸಿದ್ದು, 5.32 ಲಕ್ಷ ಟನ್ ಕಾರ್ಗೋ ವಹಿವಾಟು ನಡೆದಿದೆ. ಇತ್ತೀಚೆಗಷ್ಟೇ ಇದರ ಟರ್ಮಿನಲ್-2 ‘ಸ್ಕೈಟ್ರಾಕ್ಸ್’ನಿಂದ ‘5-ಸ್ಟಾರ್’ ರೇಟಿಂಗ್ ಪಡೆದ ಭಾರತದ ಏಕೈಕ ಟರ್ಮಿನಲ್ ಎನಿಸಿಕೊಂಡಿದೆ.
ಅದೇ ರೀತಿ ವ್ಯಾಂಕೋವರ್ ಏರ್ಪೋರ್ಟ್ ಮೂಲಕ ಕಳೆದ ವರ್ಷ 2.69 ಕೋಟಿ ಪ್ರಯಾಣಿಕರು ಸಂಚರಿಸಿದ್ದು, 3.65 ಲಕ್ಷ ಟನ್ ಕಾರ್ಗೋ ವಹಿವಾಟು ನಡೆದಿದೆ. ಸತತ 15 ವರ್ಷಗಳಿಂದ ಇದು ‘ಉತ್ತರ ಅಮೆರಿಕದ ಅತ್ಯುತ್ತಮ ವಿಮಾನ ನಿಲ್ದಾಣ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಈ ಎರಡು ಬೃಹತ್ ವಿಮಾನ ನಿಲ್ದಾಣಗಳು ಕೈಜೋಡಿಸಿರುವುದು ವಿಮಾನಯಾನ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.
