ಟೋಕಿಯೊ: ಉತ್ತರ ಜಪಾನ್‌ನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಈ ಭಾರೀ ಭೂಕಂಪ ದೇಶದ ಜನರಲ್ಲಿ ಆತಂಕ ಮೂಡಿಸಿದೆ. ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಈ ಭೂಕಂಪವು ಇವಾಟೆ ಪ್ರಾಂತ್ಯದ ಪೆಸಿಫಿಕ್ ಮಹಾಸಾಗರ ಭಾಗದಲ್ಲಿ ದಾಖಲಾಗಿದೆ. ಈ ಕಂಪನದ ಪರಿಣಾಮವಾಗಿ ನೂರಾರು ಕಿಲೋಮೀಟರ್ ದೂರದಲ್ಲಿರುವ ರಾಜಧಾನಿ ಟೋಕಿಯೊವರೆಗೂ ಕಟ್ಟಡಗಳು ಜೋರಾಗಿ ಕಂಪಿಸಿದವು.
ಜಪಾನ್‌ನ ಉತ್ತರ ಭಾಗದಲ್ಲಿ ಸೋಮವಾರ ಸಂಜೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯನ್ನು ದಾಖಲಿಸಿದ ಈ ಕಂಪನದ ಹಿನ್ನೆಲೆ ಜಪಾನ್ ಹವಾಮಾನ ಸಂಸ್ಥೆ (JMA) ಸುನಾಮಿ ಎಚ್ಚರಿಕೆಯನ್ನು ಪ್ರಕಟಿಸಿದೆ. ಮೂರು ಮೀಟರ್ (ಸುಮಾರು 10 ಅಡಿ) ಎತ್ತರದ ಅಲೆಗಳು ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ವಿವರಗಳು
ಉತ್ತರ ಇವಾಟೆ ಪ್ರಾಂತ್ಯದ ಪೆಸಿಫಿಕ್ ಸಮುದ್ರತೀರದಲ್ಲಿ ಸ್ಥಳೀಯ ಕಾಲಮಾನ ಸಂಜೆ 4:53 ಕ್ಕೆ ಭೂಕಂಪ ಸಂಭವಿಸಿದೆ. ಕಂಪನದ ಕೇಂದ್ರಭಾಗ ಸಮುದ್ರ ಮಟ್ಟದಿಂದ ಸುಮಾರು 60 ಕಿಲೋಮೀಟರ್ ಆಳದಲ್ಲಿತ್ತು ಎಂದು ಭೂಗರ್ಭಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಇದರ ಪ್ರಭಾವ ನೂರಾರು ಕಿಲೋಮೀಟರ್ ದೂರದಲ್ಲಿರುವ ರಾಜಧಾನಿ ಟೋಕಿಯೊದಲ್ಲೂ ದೊಡ್ಡ ಕಟ್ಟಡಗಳು ಕಂಪಿಸಿದವು. ಸಂಭವಿಸಿದ ಭೂಕಂಪನದಿಂದ ಭಯದಿಂದ ಜನರು ಮನೆಗಳಿಂದ ಹೊರಗೆ ಓಡಿಬಂದರು.
ಸುನಾಮಿ ಎಚ್ಚರಿಕೆ ಮತ್ತು ಸ್ಥಳಾಂತರಿಸುವಿಕೆ
ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ತಲುಪಬಹುದು ಎಂದು ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಈ ಅಲೆಗಳಿಂದ ಕರಾವಳಿ ಪ್ರದೇಶಗಳಲ್ಲಿ ಗಂಭೀರ ಹಾನಿಯಾಗುವ ಸಾಧ್ಯತೆಯಿದೆ. ಕೂಡಲೇ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಭೂಕಂಪದ ನಂತರ ಎಚ್ಚರಿಕೆ ಸಂದೇಶಗಳನ್ನು ದೂರದರ್ಶನ, ರೇಡಿಯೋ ಮತ್ತು ಮೊಬೈಲ್ ಫೋನ್‌ಗಳ ಮೂಲಕ ಪ್ರಸಾರ ಮಾಡಲಾಯಿತು.
ಜಪಾನ್-ಭೂಕಂಪಗಳ ನಾಡು
ವಿಶ್ವದಲ್ಲೇ ಅತಿ ಹೆಚ್ಚು ಭೂಕಂಪಗಳು ಸಂಭವಿಸುವ ದೇಶಗಳಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದೆ. ಪೆಸಿಫಿಕ್ ‘ರಿಂಗ್ ಆಫ್ ಫೈರ್’ (ಅಗ್ನಿವಲಯ) ಎಂಬ ಪ್ರದೇಶದ ಪಶ್ಚಿಮ ಅಂಚಿನಲ್ಲಿ ಜಪಾನ್ ನೆಲೆಗೊಂಡಿದೆ. ಜಪಾನ್‌ನಲ್ಲಿ ನಿರಂತರವಾಗಿ ಸಣ್ಣಪುಟ್ಟ ಕಂಪನಗಳು ಸಂಭವಿಸುತ್ತಿರುತ್ತವೆ.
2011ರ ದುರಂತದ ನೆನಪು
2011ರ ಮಾರ್ಚ್ ನಲ್ಲಿ ಜಪಾನ್‌ನಲ್ಲಿ 9.0 ತೀವ್ರತೆಯ ಪ್ರಚಂಡ ಭೂಕಂಪ ಸಂಭವಿಸಿತ್ತು. ಅದರಿಂದ ಉಂಟಾದ ಸುನಾಮಿಯು ಫುಕುಶಿಮಾ ಅಣು ವಿದ್ಯುತ್ ಸ್ಥಾವರವನ್ನು ತೀವ್ರವಾಗಿ ಹಾನಿಗೊಳಿಸಿತ್ತು. ಆ ದುರಂತದಲ್ಲಿ ಸುಮಾರು 18,500 ಜನರು ಮೃತಪಟ್ಟಿದ್ದರು ಅಥವಾ ನಾಪತ್ತೆಯಾಗಿದ್ದರು. ಈಗ ಮತ್ತೆ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜನರಲ್ಲಿ 2011ರ ಘಟನೆಯ ಕಹಿ ನೆನಪುಗಳನ್ನು ಮರುಕಳಿಸಿದೆ.
