ಮಧ್ಯಪ್ರಾಚ್ಯದಲ್ಲಿ ಯುದ್ಧದ ಪ್ರಾರಂಭವಾಗಿದೆ. ಪರಮಾಣು ಒಪ್ಪಂದದ ಮಾತುಕತೆಗಳು ನಡೆಯುತ್ತಿರುವಾಗಲೇ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯ ಅತ್ಯಂತ ಆಘಾತಕಾರಿ ಅಂಶವೆಂದರೆ, ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನೇ ಗುರಿಯಾಗಿಸಿಕೊಂಡು 7 ಕ್ಷಿಪಣಿಗಳನ್ನು ಹಾರಿಸಲಾಗಿದೆ. ಇಡೀ ಟೆಹ್ರಾನ್ ನಗರ ಸ್ಫೋಟದ ಸದ್ದಿಗೆ ನಡುಗಿದೆ.
ಖಮೇನಿ ಟಾರ್ಗೆಟ್ ಮತ್ತು ಸ್ಥಳಾಂತರ
ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ಫೈಟರ್ ಜೆಟ್‌ಗಳು ಬೆಂಕಿಯ ಮಳೆ ಸುರಿಸಿವೆ. ವರದಿಗಳ ಪ್ರಕಾರ, ಅಲಿ ಖಮೇನಿ ಅವರ ಕಚೇರಿ ಮತ್ತು ನಿವಾಸದ ಮೇಲೆ ಏಳು ಅತ್ಯಾಧುನಿಕ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ದಾಳಿಯ ತೀವ್ರತೆ ಅರಿತ ಇರಾನ್ ಭದ್ರತಾ ಪಡೆಗಳು, ಕ್ಷಿಪಣಿಗಳು ಅಪ್ಪಳಿಸುವ ಕೆಲವೇ ಕ್ಷಣಗಳ ಮೊದಲು ಖಮೇನಿ ಅವರನ್ನು ಗುಟ್ಟಾದ ಮತ್ತು ಸುರಕ್ಷಿತ ಬಂಕರ್‌ಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿವೆ ಎನ್ನಲಾಗಿದೆ. ಸದ್ಯ ಖಮೇನಿ ಅವರ ಅವರ ಬಗ್ಗೆ ಇರಾನ್ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
War has begun!
The sound of three explosions reported in central Tehran , the situation looks tense and developing.
Hoping for clarity, restraint, and safety for civilians. #Tehran #Iran pic.twitter.com/aPujyysWMO
— Mirchi Masala (@iMirchiMasala) February 28, 2026
30 ಪ್ರಮುಖ ಕೇಂದ್ರಗಳ ಮೇಲೆ ದಾಳಿ
ಇಸ್ರೇಲ್ ಕೇವಲ ರಾಜಧಾನಿಯನ್ನಷ್ಟೇ ಅಲ್ಲದೆ, ಇರಾನ್‌ನ ಬೆನ್ನೆಲುಬಾಗಿರುವ ಸುಮಾರು 30 ಪ್ರಮುಖ ಗುರಿಗಳನ್ನು ಧ್ವಂಸಗೊಳಿಸಿದೆ. ಇರಾನ್‌ನ ಪರಮಾಣು ಶಕ್ತಿ ಕೇಂದ್ರಗಳ ಮೇಲೆ ದಾಳಿ ನಡೆಸಿ ಸಂಶೋಧನೆಗಳಿಗೆ ತಡೆಯೊಡ್ಡಲಾಗಿದೆ. ಇರಾನ್‌ನ ಗುಪ್ತಚರ ಸಂಸ್ಥೆ ಮತ್ತು ರಕ್ಷಣಾ ಸಚಿವಾಲಯದ ಮೇಲೆ ದಾಳಿ ಮಾಡಿ ಮಾಹಿತಿ ವ್ಯವಸ್ಥೆಯನ್ನು ಜಖಂಗೊಳಿಸಲಾಗಿದೆ. ಟೆಹ್ರಾನ್ ಸೇರಿದಂತೆ ಕೋಮ್, ತಬ್ರಿಜ್, ಕೆರ್ಮನ್‌ಶಾ, ಕರಾಜ್ ಮತ್ತು ಇಸ್ಫಹಾನ್ ನಗರಗಳಲ್ಲಿ ಭೀಕರ ಸ್ಫೋಟಗಳು ಸಂಭವಿಸಿವೆ.
ವಾಯುಸೀಮೆ ಬಂದ್-ಯುದ್ಧದ ಭೀತಿ
ದಾಳಿಯ ಬೆನ್ನಲ್ಲೇ ಇರಾನ್ ತನ್ನ ಸಂಪೂರ್ಣ ವಾಯುಪ್ರದೇಶವನ್ನು (Airspace) ಮುಚ್ಚಿದೆ. ನೆರೆಯ ರಾಷ್ಟ್ರ ಇರಾಕ್‌ಗೂ ತನ್ನ ವಾಯುಸೀಮೆ ಬಂದ್ ಮಾಡಲು ಸೂಚನೆ ನೀಡಲಾಗಿದೆ. ಯಾವುದೇ ಕ್ಷಣದಲ್ಲಿ ಇರಾನ್‌ನಿಂದ ಇಸ್ರೇಲ್ ಮೇಲೆ ಪ್ರತಿ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಈ ಪ್ರದೇಶದಲ್ಲಿ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇಸ್ರೇಲ್‌ನಲ್ಲಿ ಹೈ ಅಲರ್ಟ್-ಶಾಲೆಗಳು ಬಂದ್
ಇತ್ತ ಇಸ್ರೇಲ್ ಕೂಡ ಇರಾನ್‌ನ ಪ್ರತಿದಾಳಿಯನ್ನು ಎದುರಿಸಲು ಸಜ್ಜಾಗಿದೆ. ಇರಾನ್‌ನಿಂದ ಕ್ಷಿಪಣಿಗಳು ಬರುವ ಸಾಧ್ಯತೆ ಇರುವುದರಿಂದ ಜೆರುಸಲೆಮ್ ಮತ್ತು ಟೆಲ್ ಅವಿವ್ ನಗರಗಳಲ್ಲಿ ಸೈರನ್‌ಗಳನ್ನು ಮೊಳಗಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜೆರುಸಲೆಮ್‌ನಲ್ಲಿ ಮಾರ್ಚ್ 2ರ ಸಂಜೆ 6 ಗಂಟೆಯವರೆಗೆ ಎಲ್ಲಾ ಶಾಲೆಗಳು ಮತ್ತು ಕಚೇರಿಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ. ಸಾರ್ವಜನಿಕರು ಬಂಕರ್‌ಗಳ ಸಮೀಪವೇ ಇರುವಂತೆ ಸೂಚನೆ ನೀಡಲಾಗಿದೆ.
ಈ ಜಂಟಿ ದಾಳಿಯು ಮಧ್ಯಪ್ರಾಚ್ಯದ ಭೂಪಟವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ. ಅಮೆರಿಕದ ನೇರ ಹಸ್ತಕ್ಷೇಪವು ರಷ್ಯಾ ಮತ್ತು ಇತರ ರಾಷ್ಟ್ರಗಳ ಪ್ರತಿಕ್ರಿಯೆಗೆ ಕಾರಣವಾಗುವ ಸಾಧ್ಯತೆಯಿದ್ದು, ಇದು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತದೆಯೇ ಎಂಬ ಆತಂಕ ಜಗತ್ತನ್ನು ಆವರಿಸಿದೆ.