ಟ್ರಂಪ್ ಎಚ್ಚರಿಕೆ ಬಳಿಕ ಎಫ್-15 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್

Untitled design 2026 03 22T203253.130

ಟೆಹ್ರಾನ್: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ 48 ಗಂಟೆಗಳ ಅಂತಿಮ ಗಡುವು ನೀಡಿದ ಕೆಲವೇ ಗಂಟೆಗಳ ಬಳಿಕ, ಇರಾನ್ ಸೇನೆ ಹಾರ್ಮುಜ್ ದ್ವೀಪದ ಬಳಿ ‘ಶತ್ರು’ ದೇಶದ ಎಫ್-15 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ಮಾಧ್ಯಮಗಳು ಹೇಳಿಕೊಂಡಿವೆ. ಈ ಕಾರ್ಯಾಚರಣೆಯ 29 ಸೆಕೆಂಡುಗಳ ವಿಡಿಯೋವನ್ನು ಟೆಹ್ರಾನ್ ಟೈಮ್ಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿಡುಗಡೆ ಮಾಡಿದೆ.

ಇರಾನ್ ಮಾಧ್ಯಮಗಳ ಪ್ರಕಾರ, ದೇಶದ ದಕ್ಷಿಣ ಕರಾವಳಿಯ ಸಮೀಪದ ಹಾರ್ಮುಜ್ ದ್ವೀಪದ ಬಳಿ ಈ ಘಟನೆ ನಡೆದಿದೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು ಶಂಕಾಸ್ಪದವಾಗಿ ಪ್ರವೇಶಿಸಿದ ಯುದ್ಧ ವಿಮಾನವನ್ನು ಪತ್ತೆಹಚ್ಚಿ ತಕ್ಷಣವೇ  ಅದನ್ನು ಹೊಡೆದುರುಳಿಸಿವೆ ಎಂದು ತಿಳಿಸಲಾಗಿದೆ.

ಈ ಬಗ್ಗೆ ವರದಿ ಮಾಡಿದ ಟೆಹ್ರಾನ್ ಟೈಮ್ಸ್, ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟ್ಟರ್) ನಲ್ಲಿ ಸುಮಾರು 29 ಸೆಕೆಂಡುಗಳ ವಿಡಿಯೋವನ್ನೂ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಎಫ್-15 ಯುದ್ಧ ವಿಮಾನವನ್ನು ಗುರುತಿಸುವುದು ಮತ್ತು ಅದನ್ನು ಗುರಿಯಾಗಿಸಿ ಹೊಡೆದುರುಳಿಸುವ ದೃಶ್ಯಗಳಿವೆ ಎಂದು ಹೇಳಲಾಗಿದೆ.

ಎಫ್-15 ಯುದ್ಧ ವಿಮಾನವು ನಾಲ್ಕನೇ ತಲೆಮಾರಿನ ಅತ್ಯಾಧುನಿಕ ಫೈಟರ್ ಜೆಟ್ ಆಗಿದ್ದು, ಇದು ಸಾಮಾನ್ಯವಾಗಿ ಅಮೆರಿಕ ಸೇನೆ ಅಥವಾ ಇಸ್ರೇಲ್ ರಕ್ಷಣಾ ಪಡೆಗಳ ಬಳಕೆಯಲ್ಲಿದೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಅದು ಅಮೆರಿಕ ಅಥವಾ ಇಸ್ರೇಲ್ ಗೆ ಸೇರಿದದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಎರಡೂ ದೇಶಗಳಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.

ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, 48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಸೂಚಿಸಿದ್ದರು. ಇಲ್ಲವಾದರೆ ಪರಿಣಾಮಗಳು ಗಂಭೀರವಾಗಿರಬಹುದು ಎಂದು ಎಚ್ಚರಿಕೆ ನೀಡಿದ್ದರು.

ಟ್ರಂಪ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇರಾನ್‌ನ ಉನ್ನತಾಧಿಕಾರಿಯೊಬ್ಬರು, “ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಚ್ಚಲಾಗಿಲ್ಲ. ಇದು ಕೇವಲ ಶತ್ರು ರಾಷ್ಟ್ರಗಳಿಗೆ ಮಾತ್ರ ನಿರ್ಬಂಧಿತವಾಗಿದೆ” ಎಂದು ಹೇಳಿದ್ದಾರೆ. ಜೊತೆಗೆ, ಸಮುದ್ರ ಭದ್ರತೆ ಕಾಪಾಡಲು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ನೆರೆಯ ರಾಷ್ಟ್ರಗಳೊಂದಿಗೆ ಸಹಕಾರ ಮಾಡಲು ಇರಾನ್ ಸಿದ್ಧವಾಗಿದೆ ಎಂದು ಕೂಡ ಹೇಳಿದ್ದಾರೆ. ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.

Exit mobile version