ಜಾಗತಿಕ ತೈಲ ಮತ್ತು ವಾಣಿಜ್ಯ ಸಾಗಣೆಯ ಅತ್ಯಂತ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ (Strait Of Hormuz) ಈಗ ಮತ್ತೆ ಯುದ್ಧದ ಕಾರ್ಮೋಡ ಸಾಕ್ಷಿಯಾಗುತ್ತಿದೆ. ಭಾರತದತ್ತ ಬರುತ್ತಿದ್ದ ‘ಎಪಾಮಿನೊಂಡಾಸ್’ ಸೇರಿದಂತೆ ಎರಡು ಬೃಹತ್ ಸರಕು ಹಡಗುಗಳನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗುಂಡು ಹಾರಿಸಿ ವಶಪಡಿಸಿಕೊಂಡಿದೆ. ಈ ಘಟನೆಯು ಅಂತರಾಷ್ಟ್ರೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಏನಿದು ಘಟನೆ?
ಲೈಬೀರಿಯಾ ಧ್ವಜದ ಅಡಿಯಲ್ಲಿ ದುಬೈನ ಜೆಬೆಲ್ ಅಲಿ ಬಂದರಿನಿಂದ ಹೊರಟಿದ್ದ ‘ಎಪಾಮಿನೊಂಡಾಸ್’ ಕಂಟೇನರ್ ಹಡಗು ಗುಜರಾತ್ ಕರಾವಳಿಯತ್ತ ಸಾಗುತ್ತಿತ್ತು. ಹಾರ್ಮುಜ್ ಜಲಸಂಧಿಯ ಬಳಿ ಬರುತ್ತಿದ್ದಂತೆ ಇರಾನ್ ಪಡೆಗಳು ಹಡಗನ್ನು ತಡೆದು ನಿಲ್ಲಿಸುವಂತೆ ಎಚ್ಚರಿಕೆ ನೀಡಿದವು. ಹಡಗು ಆದೇಶ ಪಾಲಿಸದಿದ್ದಾಗ ಇರಾನ್‌ನ ಗನ್ ಬೋಟ್‌ಗಳು ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿ ಅದನ್ನು ವಶಕ್ಕೆ ಪಡೆದಿವೆ. ಇದರ ಬೆನ್ನಲ್ಲೇ ‘MSC ಫ್ರಾನ್ಸೆಸ್ಕಾ’ ಎಂಬ ಮತ್ತೊಂದು ಹಡಗನ್ನೂ ಇರಾನ್ ಸೈನಿಕರು ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ಇರಾನ್ ನೀಡುತ್ತಿರುವ ಕಾರಣಗಳೇನು?
ಈ ಹಡಗುಗಳು ಅಗತ್ಯ ಪರವಾನಗಿಗಳಿಲ್ಲದೆ ಸಂಚರಿಸುತ್ತಿದ್ದವು ಮತ್ತು ಉದ್ದೇಶಪೂರ್ವಕವಾಗಿ ತಮ್ಮ ‘ನ್ಯಾವಿಗೇಷನ್ ಸಿಸ್ಟಮ್’ ಹಾಗೂ ‘ಟ್ರಾನ್ಸ್‌ಪಾಂಡರ್‌ಗಳನ್ನು’ ಆಫ್ ಮಾಡಿದ್ದವು ಎಂದು ಇರಾನ್ ಆರೋಪಿಸಿದೆ. ಸಮುದ್ರದ ಭದ್ರತೆಗೆ ಇವು ಅಪಾಯಕಾರಿ ಎಂಬ ನೆಪದಲ್ಲಿ ಇರಾನ್ ಈ ಕ್ರಮ ಕೈಗೊಂಡಿದೆ. ಆದರೆ, ಅಮೆರಿಕ ಹೇರಿರುವ ದಿಗ್ಬಂಧನದ ವಿರುದ್ಧ ಇರಾನ್ ತನ್ನ ಆಕ್ರೋಶವನ್ನು ಈ ಮೂಲಕ ವ್ಯಕ್ತಪಡಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದ ಮೇಲೆ ಏನು ಪರಿಣಾಮ?
ವಶಪಡಿಸಿಕೊಳ್ಳಲಾದ ಹಡಗು ನೇರವಾಗಿ ಗುಜರಾತ್ ಬಂದರಿಗೆ ಬರುತ್ತಿದ್ದ ಕಾರಣ, ಭಾರತದ ವಾಣಿಜ್ಯ ಸರಬರಾಜಿನ ಮೇಲೆ ಇದು ನೇರ ಪರಿಣಾಮ ಬೀರಲಿದೆ. ಹಾರ್ಮುಜ್ ಜಲಸಂಧಿಯು ವಿಶ್ವದ ಒಟ್ಟು ತೈಲ ಸಾಗಣೆಯ ಶೇ. 20ರಷ್ಟು ಪಾಲನ್ನು ಹೊಂದಿರುವುದರಿಂದ, ಇಲ್ಲಿನ ಉದ್ವಿಗ್ನತೆಯು ತೈಲ ಬೆಲೆ ಏರಿಕೆ ಮತ್ತು ಸರಕು ಸಾಗಣೆ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಬಹುದು.
ಅಮೆರಿಕ-ಇರಾನ್ ನಡುವಿನ ತಿಕ್ಕಾಟ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ವಿಸ್ತರಿಸಲು ಮುಂದಾಗಿದ್ದರೂ, ಇರಾನ್ ಮಾತ್ರ ಅಮೆರಿಕದ ಆರ್ಥಿಕ ದಿಗ್ಬಂಧನವನ್ನು “ಒಪ್ಪಂದದ ಉಲ್ಲಂಘನೆ” ಎಂದು ಕರೆದಿದೆ. ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯುವುದು ಅಸಾಧ್ಯ ಎಂದು ಇರಾನ್ ನಾಯಕರು ಎಚ್ಚರಿಸಿದ್ದು, ಮುಂದಿನ ದಿನಗಳಲ್ಲಿ ಸಮುದ್ರ ಮಾರ್ಗದ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳಿವೆ.





