ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರ ಬಾಂಬ್ ಅಳವಡಿಸಿದ ಇರಾನ್: ಟ್ರಂಪ್ ಕೆಂಡಾಮಂಡಲ! ಏನಿದು ನೇವಲ್ ಮೈನ್ಸ್..?

Untitled design 2026 03 11T163249.072

ಜಾಗತಿಕ ತೈಲ ವ್ಯಾಪಾರದ ಜೀವನಾಡಿ ಎನಿಸಿಕೊಂಡಿರುವ ‘ಹಾರ್ಮುಜ್ ಜಲಸಂಧಿ’ (Strait of Hormuz) ಈಗ ಯುದ್ಧದ ಆಖಾಡವಾಗುತ್ತಿದೆ. ತನ್ನ ಮೇಲೆ ನಡೆದ ದಾಳಿಗಳಿಗೆ ಪ್ರತಿಯಾಗಿ ಇರಾನ್, ಸಮುದ್ರ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಲು ಸ್ಫೋಟಕಗಳನ್ನು (ನೇವಲ್ ಮೈನ್ಸ್) ಅಳವಡಿಸಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಯಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಂಡಾಮಂಡಲವಾಗಿದ್ದು, ಇರಾನ್ ಮೇಲೆ ಭೀಕರ ಮಿಲಿಟರಿ ದಾಳಿಯ ಎಚ್ಚರಿಕೆ ನೀಡಿದ್ದಾರೆ.

ಏನಿದು ನೇವಲ್ ಮೈನ್ಸ್ ? 

ಸಾಮಾನ್ಯವಾಗಿ ನಕ್ಸಲರು ಅಥವಾ ಉಗ್ರರು ಭೂಮಿಯ ಅಡಿಯಲ್ಲಿ ಇಡುವ ‘ಲ್ಯಾಂಡ್ ಮೈನ್’ಗಳ ಬಗ್ಗೆ ನಾವು ಕೇಳಿದ್ದೇವೆ. ಅದರಂತೆಯೇ ಸಮುದ್ರದ ನೀರಿನ ಅಡಿಯಲ್ಲಿ ಹಡಗುಗಳು ಮತ್ತು ಜಲಾಂತರ್ಗಾಮಿಗಳನ್ನು (Submarines) ನಾಶಪಡಿಸಲು ಬಳಸುವ ಸ್ಫೋಟಕಗಳೇ ಈ ‘ನೇವಲ್ ಮೈನ್ಸ್’.

ಇವುಗಳನ್ನು ಹಡಗುಗಳು ಅವುಗಳ ಸಂಪರ್ಕಕ್ಕೆ ಬಂದಾಗ ಅಥವಾ ಹತ್ತಿರ ಸುಳಿದಾಗ ಸ್ಫೋಟಗೊಳ್ಳುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಇವು ಕ್ಷಿಪಣಿಗಳಿಗಿಂತ ಅಗ್ಗವಾಗಿದ್ದರೂ, ಒಂದು ಬೃಹತ್ ಹಡಗನ್ನು ಕ್ಷಣಮಾತ್ರದಲ್ಲಿ ಮುಳುಗಿಸುವಷ್ಟು ಶಕ್ತಿಶಾಲಿಯಾಗಿರುತ್ತವೆ.

ಕಾರ್ಯನಿರ್ವಹಣೆ ಮತ್ತು ವಿಧಗಳು: ನೇವಲ್ ಮೈನ್ಸ್‌ಗಳನ್ನು ಸಮುದ್ರದಲ್ಲಿ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ:

  1. ಸಂಪರ್ಕ ಸ್ಫೋಟ (Contact Mines): ಹಡಗಿನ ತಳಭಾಗ ಈ ಮೈನ್‌ಗೆ ತಗುಲಿದ ಕೂಡಲೇ ಸ್ಫೋಟ ಸಂಭವಿಸುತ್ತದೆ.

  2. ಸಂವೇದಕ ಆಧಾರಿತ (Influence Mines): ಇವುಗಳು ಹಡಗಿನ ಪ್ರೊಪೆಲ್ಲರ್ ಶಬ್ದ, ನೀರಿನ ಒತ್ತಡದಲ್ಲಿನ ಬದಲಾವಣೆ ಅಥವಾ ಹಡಗಿನ ಕಾಂತೀಯ ಕ್ಷೇತ್ರವನ್ನು (Magnetic Field) ಪತ್ತೆಹಚ್ಚಿ ಸ್ಫೋಟಗೊಳ್ಳುತ್ತವೆ.

  3. ಸ್ಥಿರ ಮತ್ತು ತೇಲುವ ಮೈನ್ಸ್: ಕೆಲವು ಮೈನ್‌ಗಳನ್ನು ಸಮುದ್ರದ ತಳಕ್ಕೆ ಕಟ್ಟಿಹಾಕಲಾಗುತ್ತದೆ, ಇನ್ನು ಕೆಲವು ನೀರಿನ ಮೇಲೆ ತೇಲುತ್ತಾ ಶತ್ರು ಹಡಗುಗಳಿಗಾಗಿ ಕಾಯುತ್ತಿರುತ್ತವೆ.

ಟ್ರಂಪ್ ಎಚ್ಚರಿಕೆ

ವರದಿಗಳ ಪ್ರಕಾರ, ಇರಾನ್ ಸುಮಾರು 2,000 ರಿಂದ 5,000 ನೇವಲ್ ಮೈನ್ಸ್‌ಗಳನ್ನು ಹೊಂದಿರುವ ಸಾಧ್ಯತೆಯಿದೆ. ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾದ ತಂತ್ರಜ್ಞಾನವನ್ನು ಬಳಸಿ ಇರಾನ್ ಈ ಸ್ಫೋಟಕಗಳನ್ನು ಅಭಿವೃದ್ಧಿಪಡಿಸಿದೆ ಎನ್ನಲಾಗಿದೆ.

ಈಗಾಗಲೇ ಹಾರ್ಮುಜ್ ಜಲಸಂಧಿಯಲ್ಲಿ ಮೈನ್ ಅಳವಡಿಸುತ್ತಿದ್ದ ಇರಾನ್‌ನ 16 ಹಡಗುಗಳನ್ನು ಅಮೆರಿಕ ನಾಶಪಡಿಸಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಇರಾನ್ ತನ್ನ ಸ್ಫೋಟಕಗಳನ್ನು ತಕ್ಷಣವೇ ತೆರವುಗೊಳಿಸದಿದ್ದರೆ, ಹಿಂದೆಂದೂ ಕಾಣದ ರೀತಿಯಲ್ಲಿ ಮಿಲಿಟರಿ ದಾಳಿ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಖಡಕ್ ಸಂದೇಶ ರವಾನಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ಮೂಲಕ ವಿಶ್ವದ ಶೇ. 20 ರಷ್ಟು ತೈಲ ಸರಬರಾಜು ನಡೆಯುತ್ತದೆ. ಇಲ್ಲಿ ಇರಾನ್ ಹೂಡಿರುವ ಈ ‘ಸಮುದ್ರ ಬಲೆ’ ಜಾಗತಿಕ ಆರ್ಥಿಕತೆಯ ಮೇಲೂ ಭಾರಿ ಪರಿಣಾಮ ಬೀರಲಿದೆ.

Exit mobile version