ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶಕ್ಕೆ ಇರಾನ್ ನೇರ ಎಚ್ಚರಿಕೆ ನೀಡಿದೆ. ದುಬೈನ ಪ್ರಮುಖ ಜೆಬೆಲ್ ಅಲಿ ಬಂದರು, ಅಬುಧಾಬಿಯ ಖಲೀಫಾ ಬಂದರು ಹಾಗೂ ಫುಜೈರಾ ಬಂದರಿನ ಸುತ್ತಮುತ್ತಲಿನ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡುವಂತೆ ಇರಾನ್ ತುರ್ತು ಸೂಚನೆ ನೀಡಿದೆ ಎಂದು ಇರಾನ್‌ನ ಅರೆ ಸರ್ಕಾರಿ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯುಎಇ ಮೂಲಕ ತನ್ನ ಮೇಲೆ ದಾಳಿ ನಡೆದಿದೆ ಎಂಬ ಆರೋಪ ಮಾಡಿರುವ ಇರಾನ್, ಅದರ ವಿರುದ್ಧ ಪ್ರತಿ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಹೇಳಿದೆ. ಈ ಹಿನ್ನೆಲೆ ಯುಎಇಯ ಪ್ರಮುಖ ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ವರದಿಗಳ ಪ್ರಕಾರ ದುಬೈನ ಜೆಬೆಲ್ ಅಲಿ ಬಂದರು ಇರಾನ್ ಹಿಟ್ ಲಿಸ್ಟ್‌ನಲ್ಲಿ ಪ್ರಮುಖವಾಗಿ ಸೇರಿದೆ. ಮಧ್ಯಪ್ರಾಚ್ಯದಲ್ಲೇ ಅತಿ ದೊಡ್ಡ ವಾಣಿಜ್ಯ ಬಂದರುಗಳಲ್ಲಿ ಒಂದಾದ ಈ ಬಂದರು ಜಾಗತಿಕ ವಾಣಿಜ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಕಾರಣದಿಂದಾಗಿ ಇದು ದಾಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಅದೇ ರೀತಿ ಅಬುಧಾಬಿಯ ಖಲೀಫಾ ಬಂದರು ಕೂಡ ಇರಾನ್ ಗುರಿಯಲ್ಲಿದೆ ಎಂದು ಹೇಳಲಾಗಿದೆ. ಈ ಬಂದರು ಯುಎಇಯ ಪ್ರಮುಖ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ಕೇಂದ್ರವಾಗಿದ್ದು, ಅನೇಕ ಅಂತಾರಾಷ್ಟ್ರೀಯ ಹಡಗುಗಳು ಇಲ್ಲಿ ಸಂಚಾರ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಬಂದರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸುವ ಸಾಧ್ಯತೆ ಇದೆ.
ಫುಜೈರಾ ಬಂದರು ಮೇಲೆಯೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಫುಜೈರಾ ಬಂದರು ಮಧ್ಯಪ್ರಾಚ್ಯದ ಇಂಧನ ಸಾಗಾಟದಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಇಲ್ಲಿ ಅನೇಕ ತೈಲ ಟ್ಯಾಂಕರ್‌ಗಳು ನಿಲುಗಡೆ ಮಾಡುತ್ತವೆ. ಈ ಕಾರಣದಿಂದಾಗಿ ಈ ಪ್ರದೇಶವೂ ಭದ್ರತಾ ದೃಷ್ಟಿಯಿಂದ ಅತಿ ಸೂಕ್ಷ್ಮವಾಗಿರುವ ಪ್ರದೇಶವಾಗಿ ಪರಿಗಣಿಸಲಾಗಿದೆ.
ಇರಾನ್ ನೀಡಿರುವ ಎಚ್ಚರಿಕೆಯಲ್ಲಿ ಬಂದರು ಪ್ರದೇಶಗಳಷ್ಟೇ ಅಲ್ಲದೆ ವಿಮಾನ ನಿಲ್ದಾಣಗಳ ಸಮೀಪದಲ್ಲಿರುವ ನಿವಾಸಿಗಳಿಗೂ ತಕ್ಷಣ ಸ್ಥಳಾಂತರವಾಗುವಂತೆ ಸೂಚನೆ ನೀಡಲಾಗಿದೆ. ಯಾವುದೇ ಕ್ಷಣದಲ್ಲಾದರೂ ದಾಳಿ ಸಂಭವಿಸಬಹುದಾದ ಪರಿಸ್ಥಿತಿ ಉಂಟಾಗಬಹುದು ಎಂದು ಇರಾನ್ ಹೇಳಿದೆ.
