ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧದ ಮಧ್ಯೆ ಹಿರಿಯ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನೌರೆಹ್ ಖೋಜಸ್ತೆ ಬಗರ್ಜಾದೆ ನಿಧನರಾಗಿದ್ದಾರೆ ಎಂಬ ವದಂತಿಗಳಿಗೆ ಇರಾನ್ ಮಾಧ್ಯಮಗಳು ಸ್ಪಷ್ಟನೆ ನೀಡಿದೆ. ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಜೀವಂತವಾಗಿದ್ದಾರೆ ಎಂದು ಇರಾನ್‌ನ ಅಧಿಕೃತ ಮಾಧ್ಯಮಗಳು ಸ್ಪಷ್ಟಪಡಿಸಿವೆ.
ಏನಿದು ಗೊಂದಲ ?
ಫೆಬ್ರವರಿ 28ರಂದು ಟೆಹ್ರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ಭೀಕರ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಆ ಸಮಯದಲ್ಲಿ ಅವರ ಪತ್ನಿ ಮನೌರೆಹ್ ಕೂಡ ಜೊತೆಯಲ್ಲಿದ್ದರು. ದಾಳಿಯ ತೀವ್ರತೆಗೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅಥವಾ ಕೋಮಾಗೆ ಜಾರಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 2ರಂದು ಸಾವನ್ನಪ್ಪಿದ್ದಾರೆ ಎಂದು ಜಾಗತಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಈ ಎಲ್ಲಾ ವರದಿಗಳು ಕೇವಲ ಊಹಾಪೋಹಗಳಾಗಿದ್ದವು ಎಂದು ಈಗ ತಿಳಿದುಬಂದಿದೆ.
ಇರಾನ್ ಸುದ್ದಿ ಸಂಸ್ಥೆಗಳ ಸ್ಪಷ್ಟನೆ
ದಾಳಿಯಲ್ಲಿ ಬಗರ್ಜಾದೆ ಅವರು ಗಂಭೀರವಾಗಿ ಗಾಯಗೊಂಡಿರುವುದು ನಿಜ. ಅವರು ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ತಸ್ನಿಮ್ ನ್ಯೂಸ್ ಏಜೆನ್ಸಿ ವರದಿ ಮಾಡಿದ್ದರೆ, ಈ ಹಿಂದೆ ಸಾವು ಸಂಭವಿಸಿದೆ ಎಂದು ವರದಿ ಮಾಡಿದ್ದ ಫಾರ್ಸ್ ನ್ಯೂಸ್ ಏಜೆನ್ಸಿ, ಗಾಯದ ವರದಿಗಳನ್ನು ತಪ್ಪಾಗಿ ಅರ್ಥೈಸಿ ಸಾವು ಎಂದು ಪ್ರಕಟಿಸಲಾಗಿತ್ತು ಎಂದು ಕ್ಷಮೆಯಾಚಿಸಿದೆ. ಪ್ರಸ್ತುತ ಅವರು ವೈದ್ಯಕೀಯ ನಿಗಾದಲ್ಲಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಇರಾನ್ ಸರ್ಕಾರಿ ಮೂಲಗಳು ತಿಳಿಸಿವೆ.
ತಂದೆ ಅಯತೊಲ್ಲಾ ಅಲಿ ಅವರ ಹತ್ಯೆಯ ಬಳಿಕ ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಾಬಾ ಖಮೇನಿ, ಗುರುವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ತಂದೆ ಮತ್ತು ಹುತಾತ್ಮರ ರಕ್ತಕ್ಕೆ ಭೀಕರ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಅಮೆರಿಕದ ಸೇನಾ ನೆಲೆಗಳ ಮೇಲೆ ಶೀಘ್ರದಲ್ಲೇ ದಾಳಿ ನಡೆಸುತ್ತೇವೆ ಎಂದು ಗುಡುಗಿದ್ದಾರೆ.
ಶತ್ರು ರಾಷ್ಟ್ರಗಳಾದ ಅಮೆರಿಕ ಮತ್ತು ಇಸ್ರೇಲ್‌ಗೆ ಆರ್ಥಿಕ ಪೆಟ್ಟು ನೀಡಲು ಇರಾನ್ ಮುಂದಾಗಿದೆ. ಜಾಗತಿಕ ಇಂಧನ ಮಾರುಕಟ್ಟೆಯ ಜೀವನಾಡಿಯಾಗಿರುವ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚುವ ಬಗ್ಗೆ ಮೊಜ್ತಾಬಾ ಸುಳಿವು ನೀಡಿದ್ದಾರೆ. ಒಂದು ವೇಳೆ ಈ ಮಾರ್ಗ ಬಂದ್ ಆದರೆ ಜಾಗತಿಕ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗುವ ಆತಂಕ ಎದುರಾಗಿದೆ.





