ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಸಮುದ್ರದಾಳದ ಸ್ಫೋಟಕಗಳನ್ನು (ಸೀ ಮೈನ್ಸ್) ಇರಿಸಿದೆ. ಇದರಿಂದ ಅಮೆರಿಕ ಮತ್ತು ಇಸ್ರೇಲ್ ಸೇನೆಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಈ ಸ್ಫೋಟಕಗಳನ್ನು ತೆರವುಗೊಳಿಸಲು ಜಪಾನ್ ಮುಂದಾಗಿದೆ.
ಕದನ ವಿರಾಮದ ಷರತ್ತಿನೊಂದಿಗೆ ಜಪಾನ್ ಪ್ರಸ್ತಾವ
ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಕದನ ವಿರಾಮ ಘೋಷಿಸಿದರೆ, ಜಪಾನ್ ತನ್ನ ಮೈನ್ ಸ್ವೀಪರ್ ಹಡಗುಗಳನ್ನು ಬಳಸಿಕೊಂಡು ಇರಾನ್ ಇರಿಸಿರುವ ನೆಲಬಾಂಬ್‌ಗಳನ್ನು ತೆರವುಗೊಳಿಸಬಹುದು ಎಂದು ಜಪಾನ್ ವಿದೇಶಾಂಗ ಸಚಿವ ತೋಷಿಮಿಟ್ಸು ಮೊಟೆಗಿ ಹೇಳಿದ್ದಾರೆ. ನ್ಯಾಟೋ ಮಿತ್ರರಾಷ್ಟ್ರಗಳು ಇರಾನ್ ವಿರುದ್ಧದ ಯಾವುದೇ ಕಾರ್ಯಾಚರಣೆಯಲ್ಲಿ ಭಾಗವಹಿಸಲು ನಿರಾಕರಿಸಿರುವ ಹೊತ್ತಿನಲ್ಲಿ, ಜಪಾನ್ ತನ್ನ ಸಂವಿಧಾನ ಮತ್ತು ಭದ್ರತಾ ಕಾನೂನುಗಳ ಪರಿಮಿತಿಯಲ್ಲಿ ಈ ಪ್ರಸ್ತಾವನೆಯನ್ನು ಮುಂದಿಟ್ಟಿದೆ.
ಹಾರ್ಮುಜ್ ನಲ್ಲಿ IRGC ಅಬ್ಬರ
ಹಾರ್ಮುಜ್ ಜಲಸಂಧಿಯನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ದೇಶದ ಸಾಂಪ್ರದಾಯಿಕ ನೌಕಾಪಡೆ ನಿಯಂತ್ರಿಸುತ್ತಿದೆ. IRGC ಸಣ್ಣ ವೇಗದ ದೋಣಿಗಳು, ಸ್ಫೋಟಕ ತುಂಬಿದ ದೋಣಿಗಳು ಮತ್ತು ಕರಾವಳಿ ಕ್ಷಿಪಣಿ ವ್ಯವಸ್ಥೆಗಳನ್ನು ಹೊಂದಿದೆ. ಈ ಜಲಸಂಧಿ ವಿಶ್ವದ ಶೇಕಡಾ 20 ರಷ್ಟು ಕಚ್ಚಾತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದ ಬಳಿಕ ಇರಾನ್ ಈ ಮಾರ್ಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಿದೆ.
ಮೈನ್ ಸ್ವೀಪರ್ ಎಂದರೇನು?
ಜಪಾನ್‌ನ ಕಡಲ ಸ್ವರಕ್ಷಣಾ ಪಡೆ ಮೈನ್ ಸ್ವೀಪರ್ ತಂತ್ರಜ್ಞಾನದಲ್ಲಿ ವಿಶ್ವದ ಅತ್ಯಂತ ಸಮರ್ಥ ಸಂಘಟನೆ ಎನಿಸಿಕೊಂಡಿದೆ. ಮೈನ್ ಸ್ವೀಪರ್ ಎಂಬುದು ಕಡಲ ಸಂರಕ್ಷಣೆಗೆ ಬಳಸುವ ವಿಶೇಷ ಹಡಗುಗಳಾಗಿವೆ. ಇವು ಸಾಗರದ ದೊಡ್ಡ ಪ್ರದೇಶಗಳಲ್ಲಿ ಸಂಭಾವ್ಯ ಸ್ಫೋಟಕಗಳನ್ನು ಪತ್ತೆಹಚ್ಚಿ ತಟಸ್ಥಗೊಳಿಸುತ್ತವೆ. ಸುರಕ್ಷಿತ ಮಾರ್ಗಕ್ಕೆ ಅನುವು ಮಾಡಿಕೊಡುತ್ತವೆ. ಈ ತಂತ್ರಜ್ಞಾನದ ಬಲದಿಂದಲೇ ಇರಾನ್ ಇರಿಸಿರುವ ಸ್ಫೋಟಕಗಳನ್ನು ತೆರವುಗೊಳಿಸುವ ಸವಾಲನ್ನು ಜಪಾನ್ ಎದುರಿಸಲು ಸಿದ್ಧವಾಗಿದೆ.
ಸಮುದ್ರದಾಳದ ಬಾಂಬ್ ಎಂದರೇನು?
ಸಮುದ್ರ ಬಾಂಬ್ (ನೇವಲ್ ಮೈನ್) ಎಂದರೆ ನೆಲಬಾಂಬುಗಳಂತೆ ಸಾಗರದಾಳದಲ್ಲಿ ಹೂತಿಡಲಾಗುವ ಸ್ಫೋಟಕಗಳು. ಇವುಗಳನ್ನು ವಿಶೇಷ ನೌಕೆಗಳು ಅಥವಾ ಜಲಾಂತರ್ಗಾಮಿಗಳ ಮೂಲಕ ಸಮುದ್ರದಲ್ಲಿ ಇಡಲಾಗುತ್ತದೆ. ಶತ್ರು ನೌಕೆ ಅಥವಾ ಸಬ್ಮರಿನ್ ಮೇಲೆ ಹಾದುಹೋಗುವಾಗ ಅಥವಾ ದೂರದಿಂದಲೇ ಸ್ಫೋಟಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಇವು ಕ್ಷಿಪಣಿಗಳಿಗಿಂತ ಕಡಿಮೆ ವೆಚ್ಚದಾಯಕವಾಗಿದ್ದು, ಶತ್ರು ಹಡಗುಗಳಿಗೆ ಭಾರಿ ಹಾನಿ ಉಂಟುಮಾಡಬಲ್ಲವು. ಇರಾನ್ ದೇಶೀಯವಾಗಿ ನೇವಲ್ ಮೈನ್ಸ್ ತಯಾರಿಸುವ ಸಾಮರ್ಥ್ಯ ಹೊಂದಿದೆ.
ಜಾಗತಿಕ ಕಾಳಜಿ ಹೆಚ್ಚಳ
ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಮೆರಿಕ ಪಟ್ಟು ಹಿಡಿದಿದೆ. ಆದರೆ ಇರಾನ್ ಈ ಮಾರ್ಗದಲ್ಲಿ ಅಮೆರಿಕ ಅಥವಾ ಅಮೆರಿಕ ನಂಟಿನ ಹಡಗುಗಳು ಸಂಚರಿಸಿದರೆ ಸ್ಫೋಟಕ್ಕೆ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಜಪಾನ್ ಮಧ್ಯಸ್ಥಿಕೆಗೆ ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.
