ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಂಡೋನೇಷ್ಯಾದ ಐತಿಹಾಸಿಕ ಪ್ರಂಬನನ್ ಹಿಂದೂ ದೇವಾಲಯದ ಸಂಕೀರ್ಣಕ್ಕೆ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಭೇಟಿ ನೀಡಿದರು. ತ್ರಿಮೂರ್ತಿಗಳಾದ ಶಿವ, ವಿಷ್ಣು ಮತ್ತು ಬ್ರಹ್ಮನಿಗೆ ಸಮರ್ಪಿತವಾಗಿರುವ ಸುಮಾರು 1,000 ವರ್ಷಗಳಷ್ಟು ಹಳೆಯದಾದ ಈ ಭವ್ಯ ಹಿಂದೂ ದೇವಾಲಯದಲ್ಲಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಯೋಗಕರ್ತದಿಂದ ಹೆಲಿಕಾಪ್ಟರ್ ಮೂಲಕ ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಪ್ರಂಬನನ್‌ಗೆ ಆಗಮಿಸಿದ ಇಬ್ಬರು ನಾಯಕರು, ದೇವಾಲಯ ಸಂಕೀರ್ಣದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ವೈಭವವನ್ನು ಕಣ್ತುಂಬಿಕೊಂಡರು.
#WATCH | Prime Minister Narendra Modi and Indonesian President Prabowo Subianto visit Prambanan Temple in Yogyakarta and offer prayers here.
(Video: DD News) pic.twitter.com/H0GxrZWVQb
— ANI (@ANI) July 8, 2026
ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ದೇವಾಲಯ ಸಂಕೀರ್ಣದ ವೈಮಾನಿಕ ನೋಟವನ್ನು ಹಂಚಿಕೊಂಡು “ಭವ್ಯವಾದ ಪ್ರಂಬನನ್ ದೇವಾಲಯ” ಎಂದು ಬರೆದಿದ್ದಾರೆ. ಈ ಭೇಟಿ ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಪ್ರವಾಸವಾಗಿರದೆ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ದೀರ್ಘಕಾಲದ ನಾಗರಿಕ ಬಾಂಧವ್ಯಕ್ಕೆ ಹೊಸ ಬಲ ತುಂಬುವ ಹೆಜ್ಜೆಯಾಗಿದೆ. ಪ್ರಂಬನನ್ ದೇವಾಲಯ ಸಂಕೀರ್ಣದ ಜಂಟಿ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಯೋಜನೆಗೆ ಉಭಯ ರಾಷ್ಟ್ರಗಳು ಈಗಾಗಲೇ ಒಪ್ಪಿಗೆ ಸೂಚಿಸಿವೆ.
ಮಂಗಳವಾರ ನಡೆದ ದ್ವಿಪಕ್ಷೀಯ ಮಾತುಕತೆಯ ವೇಳೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸಂರಕ್ಷಣಾ ಯೋಜನೆಗೆ ಸಂಬಂಧಿಸಿದ ಉದ್ದೇಶ ಪತ್ರವನ್ನು ವಿನಿಮಯ ಮಾಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ನಿರ್ಮಾಣದ ದಿಶೆಯಲ್ಲಿ ಭಾರತ-ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸುವ ಬದ್ಧತೆಯನ್ನೂ ಪುನರುಚ್ಚರಿಸಿದರು.
ಜಾವಾ ದ್ವೀಪದಲ್ಲಿರುವ ಪ್ರಂಬನನ್, ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣವಾಗಿದ್ದು, ಕಾಂಬೋಡಿಯಾದ ಅಂಕೋರ್ ವಾಟ್ ನಂತರ ಆಗ್ನೇಯ ಏಷ್ಯಾದ ಎರಡನೇ ಅತಿದೊಡ್ಡ ಹಿಂದೂ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 40 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ಸಂಕೀರ್ಣವು ಮೂಲತಃ 240 ದೇವಾಲಯಗಳನ್ನು ಒಳಗೊಂಡಿತ್ತು. 9ನೇ ಶತಮಾನದಲ್ಲಿ ಹಿಂದೂ ಮಾತರಂ ಸಾಮ್ರಾಜ್ಯದ ಅವಧಿಯಲ್ಲಿ ರಾಜ ರಾಕೈ ಪಿಕಾಟನ್ ಇದರ ನಿರ್ಮಾಣಕ್ಕೆ ಚಾಲನೆ ನೀಡಿದ್ದಾನೆ ಎಂದು ನಂಬಲಾಗುತ್ತದೆ; ನಂತರ ಅವನ ಉತ್ತರಾಧಿಕಾರಿ ಲೋಕಪಾಲನು ಕಾರ್ಯ ಪೂರ್ಣಗೊಳಿಸಿದನು ಎನ್ನಲಾಗುತ್ತದೆ.
ಈ ದೇವಾಲಯ ಸಂಕೀರ್ಣದ ಮಧ್ಯಭಾಗದಲ್ಲಿ ಶಿವ, ವಿಷ್ಣು ಮತ್ತು ಬ್ರಹ್ಮನಿಗೆ ಸಮರ್ಪಿತವಾದ ಮೂರು ಎತ್ತರದ ದೇವಾಲಯಗಳಿದ್ದು, ಅವುಗಳಲ್ಲಿ 47 ಮೀಟರ್ ಎತ್ತರದ ಶಿವ ದೇವಾಲಯವೇ ಅತ್ಯಂತ ಭವ್ಯ ಮತ್ತು ಪ್ರಮುಖವಾಗಿದೆ. ದೇವಾಲಯದ ಗೋಡೆಗಳ ಮೇಲೆ ರಾಮಾಯಣ ಹಾಗೂ ಇತರ ಹಿಂದೂ ಮಹಾಕಾವ್ಯಗಳ ದೃಶ್ಯಗಳನ್ನು ಚಿತ್ರಿಸುವ ಅದ್ಭುತ ಕೆತ್ತನೆಗಳನ್ನು ಕಾಣಬಹುದು. ಇವು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ನಡುವಿನ ಪ್ರಾಚೀನ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿನಿಮಯದ ಸಾಕ್ಷಿಗಳಾಗಿವೆ.
10ನೇ ಶತಮಾನದಲ್ಲಿ ರಾಜಕೀಯ ಬದಲಾವಣೆಗಳು ಮತ್ತು ಮೌಂಟ್ ಮೆರಾಪಿ ಜ್ವಾಲಾಮುಖಿ ಚಟುವಟಿಕೆಯ ಪರಿಣಾಮ ಪ್ರಂಬನನ್ ದೇವಾಲಯ ಸಂಕೀರ್ಣವನ್ನು ಕೈಬಿಡಲಾಯಿತು. ಬಳಿಕ ಭೂಕಂಪಗಳಿಂದ ಅನೇಕ ರಚನೆಗಳು ಹಾನಿಗೊಳಗಾದವು. 19ನೇ ಶತಮಾನದಲ್ಲಿ ಡಚ್ ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಪುನಃಸ್ಥಾಪನೆ ಕಾರ್ಯ ಆರಂಭಗೊಂಡು, 1913ರಿಂದ 1953ರ ನಡುವೆ ಪ್ರಮುಖ ದೇವಾಲಯಗಳನ್ನು ಪುನರ್ನಿಮಿಸಲಾಯಿತು. 1991ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲ್ಪಟ್ಟ ಬಳಿಕ ಪ್ರಂಬನನ್ ಇಂಡೋನೇಷ್ಯಾದ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಯಾಗಿ ಹೊರಹೊಮ್ಮಿದೆ.
ಈಗ ಭಾರತ ಬೆಂಬಲಿತ ಹೊಸ ಪುನಃಸ್ಥಾಪನೆ ಯೋಜನೆಯ ಮೂಲಕ ನವದೆಹಲಿ ಮತ್ತು ಜಕಾರ್ತಾ ನಡುವಿನ ಸಾಂಸ್ಕೃತಿಕ ಹಾಗೂ ನಾಗರಿಕ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುವ ನಿರೀಕ್ಷೆಯಿದೆ. ಜೊತೆಗೆ ಏಷ್ಯಾದ ಅತ್ಯಂತ ಮಹತ್ವದ ಹಿಂದೂ ಸ್ಮಾರಕಗಳಲ್ಲಿ ಒಂದಾದ ಪ್ರಂಬನನ್ ದೇವಾಲಯದ ಸಂರಕ್ಷಣೆಗೂ ಹೊಸ ವೇಗ ಸಿಗಲಿದೆ.
