ಹಾರ್ಮುಜ್‌ನಲ್ಲಿ ಮತ್ತೆ ಅಮೆರಿಕ-ಇರಾನ್ ಸಂಘರ್ಷ: ಭೀಕರ ವಾಯುದಾಳಿ

Untitled design (7)

ವಾಷಿಂಗ್ಟನ್ (ಜುಲೈ 8):  ಹಾರ್ಮುಜ್ ಜಲಸಂಧಿ (Hormuz Strait) ಪ್ರದೇಶದಲ್ಲಿ ಮತ್ತೆ ಉದ್ವಿಗ್ನತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇರಾನ್ ಪಡೆಗಳು ಮೂರು ವಾಣಿಜ್ಯ ಸರಕು ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಸೇನೆ ಇಂದು (ಬುಧವಾರ) ಮುಂಜಾನೆ ಇರಾನ್ ವಿರುದ್ಧ ಭಾರೀ ವಾಯುದಾಳಿ ಆರಂಭಿಸಿದೆ. ಈ ಹಠಾತ್ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧ ಭೀತಿ ಆವರಿಸಿದ್ದು, ಅಮೆರಿಕ-ಇರಾನ್ ನಡುವಿನ ಮಧ್ಯಂತರ ಶಾಂತಿ ಪ್ರಕ್ರಿಯೆ ಸಂಪೂರ್ಣ ಹಳಿತಪ್ಪುವ ಆತಂಕ ಮೂಡಿಸಿದೆ.

ದೃಢಪಡಿಸಿದ ಅಮೆರಿಕದ ಮಿಲಿಟರಿ ಕಮಾಂಡ್

ಅಮೆರಿಕದ ಮಿಲಿಟರಿ ಕಮಾಂಡ್ ಸೆಂಟ್ಕಾಮ್ (CENTCOM) ದಾಳಿಯನ್ನು ಅಧಿಕೃತವಾಗಿ ದೃಢಪಡಿಸಿದೆ. ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ನಾಗರಿಕರಿರುವ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿರುವುದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಅಮೆರಿಕ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಯುದ್ಧವಿಮಾನಗಳು ದಕ್ಷಿಣ ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳು, ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಗಾವಲು ಕೇಂದ್ರಗಳು, ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ತಾಣಗಳು ಹಾಗೂ ಹಡಗು ವಿರೋಧಿ ಕ್ರೂಸ್ ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ಕೇಂದ್ರಗಳ ಮೇಲೆ ಭಾರೀ ಬಾಂಬ್ ದಾಳಿ ನಡೆಸಿವೆ.

ಇರಾನ್‌ನ ಸಿರಿಕ್, ಕೆಶ್ಮ್ ದ್ವೀಪ ಮತ್ತು ಪ್ರಮುಖ ಬಂದರು ನಗರ ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟಗಳು ಸಂಭವಿಸಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕೆಲವು ಮೀನುಗಾರಿಕೆ ಹಾಗೂ ವಾಣಿಜ್ಯ ಹಡಗುಕಟ್ಟೆಗಳಿಗೆ ಹಾನಿಯಾಗಿರುವ ಸಾಧ್ಯತೆಯೂ ವ್ಯಕ್ತವಾಗಿದೆ. ಈ ಬೆಳವಣಿಗೆ ಹಾರ್ಮುಜ್ ಜಲಸಂಧಿಯ ಭದ್ರತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ.

ಇರಾನ್‌ನ ಅಂತಾರಾಷ್ಟ್ರೀಯ ತೈಲ ಪರವಾನಗಿ ರದ್ದು:

ಫೆಬ್ರವರಿ 28ರಿಂದ ಆರಂಭವಾಗಿದ್ದ ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷಕ್ಕೆ ತೆರೆ ಎಳೆಯಲು ಕಳೆದ ಜೂನ್‌ನಲ್ಲಿ ಕದನ ವಿರಾಮ ಮತ್ತು 60 ದಿನಗಳ ಮಾತುಕತೆಯ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಇತ್ತೀಚಿನ ದಾಳಿಗಳು ಆ ಒಪ್ಪಂದದ ಭವಿಷ್ಯವನ್ನೇ ಅನುಮಾನಾಸ್ಪದವಾಗಿಸಿವೆ. ಹಡಗುಗಳ ಮೇಲಿನ ದಾಳಿಯ ಕೆಲವೇ ಗಂಟೆಗಳಲ್ಲಿ ಅಮೆರಿಕ, ಇರಾನ್‌ಗೆ ನೀಡಿದ್ದ ಅಂತಾರಾಷ್ಟ್ರೀಯ ತೈಲ ಮಾರಾಟದ ವಿಶೇಷ ಪರವಾನಗಿಯನ್ನು ರದ್ದುಗೊಳಿಸಿದೆ. ಇದು ಇರಾನ್‌ಗೆ ಆರ್ಥಿಕವಾಗಿ ದೊಡ್ಡ ಹೊಡೆತವೆಂದು ಪರಿಗಣಿಸಲಾಗುತ್ತಿದೆ.

ಈ ಸಂಘರ್ಷದ ಹಿನ್ನಲೆಯಲ್ಲಿ ಹಾರ್ಮುಜ್ ಜಲಸಂಧಿಯ ನಿಯಂತ್ರಣವೇ ಪ್ರಮುಖ ವಿವಾದವಾಗಿ ಹೊರಹೊಮ್ಮಿದೆ. ಹಡಗುಗಳು ಒಮಾನ್ ಕರಾವಳಿ ಮಾರ್ಗ ಬಳಸಿ ಸಂಚರಿಸಬೇಕು ಎಂಬುದು ಅಮೆರಿಕದ ನಿಲುವಾಗಿದ್ದರೆ, ಈ ಜಲಮಾರ್ಗದ ಮೇಲಿನ ನಿಯಂತ್ರಣ ತನ್ನದೇ ಆಗಿರಬೇಕು ಮತ್ತು ಹಾದುಹೋಗುವ ಹಡಗುಗಳಿಂದ ಶುಲ್ಕ ವಸೂಲಿ ಮಾಡುವ ಹಕ್ಕು ತನ್ನದೆಯೇ ಎಂದು ಇರಾನ್ ಹಠಿಸುತ್ತಿದೆ. ಇದೇ ವಿವಾದ ಇದೀಗ ಸೈನಿಕ ಮುಖಾಮುಖಿಗೆ ಕಾರಣವಾಗಿದೆ.

ಇರಾನ್ ದಾಳಿ ನಡೆಸಿದ ಹಡಗುಗಳಲ್ಲಿ ಕತಾರ್‌ನ ಎಲ್‌ಎನ್‌ಜಿ ಗ್ಯಾಸ್ ಟ್ಯಾಂಕರ್ ಹಾಗೂ ಸೌದಿ ಅರೇಬಿಯಾದ ತೈಲ ಟ್ಯಾಂಕರ್ ಸೇರಿರುವುದರಿಂದ ಕತಾರ್ ಮತ್ತು ಸೌದಿ ಅರೇಬಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಮಧ್ಯೆ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತಕ್ಷಣವೇ ಏರಿಕೆಯಾಗಿದೆ.

Exit mobile version