ರಿಯಾದ್: ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು, ಮಧ್ಯಪ್ರಾಚ್ಯದ ಪ್ರಮುಖ ತೈಲ ಉತ್ಪಾದನಾ ರಾಷ್ಟ್ರವಾದ ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಕೇಂದ್ರಗಳನ್ನೇ ಗುರಿಯಾಗಿಸಿಕೊಂಡು ಇರಾನ್ ಭೀಕರ ಡ್ರೋನ್ ದಾಳಿ ನಡೆಸಿದೆ.
ಕೆಂಪು ಸಮುದ್ರದ ತೀರದಲ್ಲಿರುವ ಸೌದಿ ಅರಾಮ್ಕೊದ ಪ್ರಮುಖ ತೈಲ ಸಂಸ್ಕರಣಾಗಾರವಾದ SAMREF (ಯಾನ್ಬು) ಮೇಲೆ ಇರಾನ್ ಡ್ರೋನ್‌ಗಳು ಬಾಂಬ್ ಸುರಿಸಿವೆ. ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ, ಸೌದಿ ಅರೇಬಿಯಾವು ತನ್ನ ತೈಲ ರಫ್ತಿಗಾಗಿ ಯಾನ್ಬು ಮತ್ತು ಫುಜೈರಾ ಬಂದರುಗಳನ್ನೇ ಹೆಚ್ಚಾಗಿ ಅವಲಂಬಿಸಿತ್ತು. ಆದರೆ, ಇರಾನ್ ಈಗ ಈ ಪರ್ಯಾಯ ಮಾರ್ಗಗಳನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಿರಂತರ ದಾಳಿಯ ಪರಿಣಾಮವಾಗಿ ಫುಜೈರಾ ಘಟಕದಲ್ಲಿ ಈಗಾಗಲೇ ತೈಲ ಉತ್ಪಾದನೆ ಮತ್ತು ಸಂಸ್ಕರಣಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ದಾಳಿಗೂ ಮುನ್ನವೇ ಇರಾನ್ ಕಠಿಣ ಎಚ್ಚರಿಕೆ ನೀಡಿತ್ತು. ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ (UAE) ವ್ಯಾಪ್ತಿಯಲ್ಲಿರುವ ತೈಲ ಮತ್ತು ಗ್ಯಾಸ್ ಘಟಕಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಕೂಡಲೇ ಜಾಗ ಖಾಲಿ ಮಾಡಬೇಕು ಎಂದು ಇರಾನ್ ಸೂಚಿಸಿತ್ತು. ಇದರ ಬೆನ್ನಲ್ಲೇ ಈಗ ಭೀಕರ ಏರ್‌ಸ್ಟ್ರೈಕ್ ನಡೆದಿದೆ.
ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪವೆಂದು ಹೆಸರುವಾಸಿಯಾದ ‘ಸೌತ್ ಪಾರ್ಸ್’ (South Pars) ನಿಕ್ಷೇಪದ ಮೇಲೆ ಇತ್ತೀಚೆಗಷ್ಟೇ ಇಸ್ರೇಲ್ ದಾಳಿ ನಡೆಸಿತ್ತು. ಈ ದಾಳಿಯಿಂದ ಕೆರಳಿದ ಇರಾನ್, ಈಗ ಇಸ್ರೇಲ್‌ನ ಮಿತ್ರ ರಾಷ್ಟ್ರಗಳ ತೈಲ ಸ್ಥಾವರಗಳ ಮೇಲೆ ಸರಣಿ ದಾಳಿ ನಡೆಸುತ್ತಿದೆ. ಮಧ್ಯಪ್ರಾಚ್ಯದಲ್ಲಿ ತೈಲ ಮತ್ತು ಗ್ಯಾಸ್ ಪೂರೈಕೆಯನ್ನು ಅಸ್ತವ್ಯಸ್ತಗೊಳಿಸುವ ಮೂಲಕ ಇಡೀ ವಿಶ್ವದ ಆರ್ಥಿಕತೆಯನ್ನು ನಡುಗಿಸುವ ತಂತ್ರವನ್ನು ಇರಾನ್ ಅನುಸರಿಸುತ್ತಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರುವ ಸಾಧ್ಯತೆ ದಟ್ಟವಾಗಿದೆ.





