ಟೆಹ್ರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ವಿರುದ್ಧ ಯುದ್ದಕ್ಕೆ ಸಿದ್ದವಾಗಿದೆ. ಕಳೆದ ಶನಿವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ‘ಆಪರೇಷನ್ ಎಪಿಕ್ ಫ್ಯೂರಿ’ ಏರ್‌ಸ್ಟ್ರೈಕ್‌ನಲ್ಲಿ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ, ಇರಾನ್ ಕೆರಳಿದ ನಾಗರಂತಾಗಿದ್ದು, ನಿನ್ನೆ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಅತ್ಯಂತ ಶಕ್ತಿಶಾಲಿ ಮತ್ತು ದುಬಾರಿ ರಾಡಾರ್ ವ್ಯವಸ್ಥೆಯನ್ನು ಇರಾನ್ ಮಣ್ಣುಪಾಲು ಮಾಡಿದೆ.
ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿದೆ. ಈ ಪೈಕಿ ಕತಾರ್‌ನಲ್ಲಿರುವ ಅಲ್ ಉದೈದ್ ವಾಯುನೆಲೆಯಲ್ಲಿ ಅಳವಡಿಸಲಾಗಿದ್ದ ಅಮೆರಿಕದ ಹೆಮ್ಮೆಯ AN/FPS-132 ರಾಡಾರ್ ವ್ಯವಸ್ಥೆಯನ್ನು ಇರಾನ್ ಧ್ವಂಸಗೊಳಿಸಿದೆ. ಸುಮಾರು 5,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶತ್ರುಗಳ ಚಲನವಲನವನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದ್ದ ಈ ರಾಡಾರ್ ನಾಶವಾಗಿರುವುದು ಅಮೆರಿಕಕ್ಕೆ ಬಹುದೊಡ್ಡ ನಷ್ಟವಾಗಿದೆ.

AN/FPS-132 ರಾಡಾರ್ ವಿಶೇಷತೆಗಳು:
-
ವೆಚ್ಚ: ಈ ಬೃಹತ್ ರಾಡಾರ್ ವ್ಯವಸ್ಥೆಯನ್ನು ಅಮೆರಿಕ 2013 ರಲ್ಲಿ ಸುಮಾರು 1.1 ಶತಕೋಟಿ ಡಾಲರ್ (ಅಂದಾಜು 9,000 ಕೋಟಿ ರೂಪಾಯಿಗೂ ಅಧಿಕ) ವೆಚ್ಚದಲ್ಲಿ ನಿರ್ಮಿಸಿತ್ತು.
-
ಸಾಮರ್ಥ್ಯ: ಇದು ಖಂಡಾಂತರ ಕ್ಷಿಪಣಿಗಳನ್ನು (Ballistic Missiles) ಸಾವಿರಾರು ಕಿಲೋಮೀಟರ್ ದೂರದಲ್ಲೇ ಗುರುತಿಸಿ ಎಚ್ಚರಿಕೆ ನೀಡುವ ಕೌಶಲ ಹೊಂದಿತ್ತು.
ADVERTISEMENTADVERTISEMENT -
ಪರಿಣಾಮ: ಈ ರಾಡಾರ್ ನಾಶದಿಂದಾಗಿ ಇಡೀ ಗಲ್ಫ್ ವಲಯದಲ್ಲಿ ಅಮೆರಿಕದ ಕಣ್ಗಾವಲು ಮತ್ತು ವಾಯು ರಕ್ಷಣಾ ವ್ಯವಸ್ಥೆಯಲ್ಲಿ ದೊಡ್ಡ ಬಿರುಕು ಮೂಡಿದೆ.
ಯುರೋಪ್‌ಗೂ ತಟ್ಟಿದ ಯುದ್ಧದ ಭೀತಿ
ದೋಹಾ, ಮನಾಮ ಮತ್ತು ದುಬೈನ ಹಲವು ಭಾಗಗಳಲ್ಲಿ ಇರಾನ್ ನಡೆಸಿದ ದಾಳಿಗಳಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಮತ್ತು ರಕ್ಷಣಾ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ. ಕತಾರ್ ಅಧಿಕಾರಿಗಳು ಕೂಡ ರಾಡಾರ್ ವ್ಯವಸ್ಥೆಯ ಮೇಲಿನ ದಾಳಿಯನ್ನು ಖಚಿತಪಡಿಸಿದ್ದಾರೆ. ಇರಾನ್‌ನ ಈ ನಿಖರ ದಾಳಿಯು ಅಮೆರಿಕದ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸವಾಲು ಎಸೆದಿದೆ. ಈ ಸಂಘರ್ಷವು ಕೇವಲ ಮಧ್ಯಪ್ರಾಚ್ಯಕ್ಕೆ ಸೀಮಿತವಾಗದೆ, ಐರೋಪ್ಯ ಒಕ್ಕೂಟದ ದೇಶಗಳಿಗೂ ವ್ಯಾಪಿಸುವ ಲಕ್ಷಣಗಳು ಕಾಣಿಸುತ್ತಿವೆ.
ಒಟ್ಟಾರೆಯಾಗಿ, ಖಮೇನಿ ಹತ್ಯೆಯ ನಂತರ ಇರಾನ್ ನಡೆಸುತ್ತಿರುವ ಈ ‘ಪ್ರತೀಕಾರದ ಪರ್ವ’ ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಎರಡೂ ಕಡೆಗಳಲ್ಲಿ ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳು ಬೂದಿಯಾಗುತ್ತಿವೆ.





