ಈವರೆಗೆ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಹಡಗುಗಳಿಗೆ ಸಿಂಹಸ್ವಪ್ನವಾಗಿದ್ದ ಇರಾನ್, ಇದೀಗ ತನ್ನ ಆಪ್ತ ಮಿತ್ರ ರಾಷ್ಟ್ರವಾದ ಚೀನಾದ ಹಡಗುಗಳಿಗೂ ಶಾಕ್ ನೀಡಿದೆ. ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗುತ್ತಿದ್ದ ಚೀನಾದ ಸರ್ಕಾರಿ ಸ್ವಾಮ್ಯದ ಬೃಹತ್ ಕಂಟೇನರ್ ಹಡಗುಗಳಿಗೆ ಇರಾನ್ ಪ್ರವೇಶ ನಿರಾಕರಿಸಿರುವ ಸುದ್ದಿ ಈಗ ಜಾಗತಿಕ ಸಂಚಲನ ಮೂಡಿಸಿದೆ.
ಏನಿದು ಘಟನೆ ?
ವಾಷಿಂಗ್ಟನ್‌ನಿಂದ ಬಂದಿರುವ ವರದಿಗಳ ಪ್ರಕಾರ, ಚೀನಾ ಸರ್ಕಾರಕ್ಕೆ ಸೇರಿದ ಎರಡು ಬೃಹತ್ ಸರಕು ಸಾಗಣೆ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಪ್ರಯತ್ನಿಸಿದವು. ಈ ಹಡಗುಗಳಲ್ಲಿ ಏಷ್ಯಾದ ವಿವಿಧ ಭಾಗಗಳಿಂದ ಲೋಡ್ ಮಾಡಲಾದ ಲಕ್ಷಾಂತರ ರೂಪಾಯಿ ಮೌಲ್ಯದ ಸರಕುಗಳಿದ್ದವು. ಇವು ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಕತಾರ್, ಕುವೈತ್ ಮತ್ತು ಇರಾಕ್‌ನಂತಹ ಪ್ರಮುಖ ಗಲ್ಫ್ ರಾಷ್ಟ್ರಗಳಿಗೆ ತಲುಪಬೇಕಿತ್ತು. ಆದರೆ, ಇರಾನ್ ಈ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಲು ಕಟ್ಟುನಿಟ್ಟಾಗಿ ನಿರಾಕರಿಸಿದೆ. ಹಡಗು ಸಂಚಾರದ ರಿಯಲ್ ಟೈಮ್ ಡೇಟಾ ನೀಡುವ ‘ಕೆಪ್ಲರ್’ (Kpler) ಸಂಸ್ಥೆಯ ವರದಿಯ ಪ್ರಕಾರ, ಈ ಹಡಗುಗಳು ಜಲಸಂಧಿಯ ಪ್ರವೇಶ ದ್ವಾರದವರೆಗೆ ಬಂದು, ಅನುಮತಿ ಸಿಗದ ಕಾರಣ ವಾಪಸ್ ಹಿಂತಿರುಗಿವೆ.
ಬದಲಾದ ಇರಾನ್ ನಿಲುವು
ಹಿಂದೆ ಇರಾನ್ ಒಂದು ಅಧಿಕೃತ ಹೇಳಿಕೆ ನೀಡಿತ್ತು. ಅಮೆರಿಕದ ಒತ್ತಡದ ನಡುವೆಯೂ ಭಾರತ, ಚೀನಾ, ರಷ್ಯಾ, ಇರಾಕ್ ಮತ್ತು ಪಾಕಿಸ್ತಾನದಂತಹ ಸ್ನೇಹಪರ ರಾಷ್ಟ್ರಗಳ ಹಡಗುಗಳಿಗೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಈಗ ಚೀನಾದ ಹಡಗುಗಳನ್ನೇ ತಡೆದಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಅಚ್ಚರಿ ಮೂಡಿಸಿದೆ. ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಭದ್ರತಾ ಕಾರಣಗಳು ಅಥವಾ ರಾಜತಾಂತ್ರಿಕ ಒತ್ತಡಗಳು ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಒಂದು ವೇಳೆ ಇರಾನ್ ತನ್ನ ಈ ಹಠಮಾರಿ ಧೋರಣೆಯನ್ನು ಮುಂದುವರಿಸಿದರೆ, ಅದು ಮಧ್ಯಪ್ರಾಚ್ಯದ ಗಲ್ಫ್ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ವರದಿಗಳ ಪ್ರಕಾರ, ಇರಾನ್ ಪ್ರಸ್ತುತ ಕೇವಲ ಗೃಹೋಪಯೋಗಿ ವಸ್ತುಗಳು, ಕಾರುಗಳು, ಬಟ್ಟೆ ಮತ್ತು ಔಷಧಗಳನ್ನು ಹೊತ್ತೊಯ್ಯುವ ಹಡಗುಗಳಿಗೆ ಮಾತ್ರ ಸೀಮಿತವಾಗಿ ಅನುಮತಿ ನೀಡುತ್ತಿದೆ. ಆದರೆ, ಆಹಾರ ಪದಾರ್ಥಗಳು ಮತ್ತು ಇತರ ಅಗತ್ಯ ವಸ್ತುಗಳ ಸಾಗಣೆಗೆ ತಡೆಯೊಡ್ಡಿದರೆ ಸೌದಿ ಅರೇಬಿಯಾ ಮತ್ತು ಯುಎಇ ಅಂತಹ ದೇಶಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಮತ್ತು ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ.





