ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿ ಜಾಗತಿಕ ಇಂಧನ ಅಭಾವ ಹೆಚ್ಚಾಗಿದೆ. ಇರಾನ್ ದಾಳಿ ಭೀತಿ ಹಿನ್ನೆಲೆಯಲ್ಲಿ ಕೊಲ್ಲಿ ಪ್ರದೇಶದ ಹಲವು ದೇಶಗಳು ತಮ್ಮ ಪ್ರಮುಖ ತೈಲ ಸಂಸ್ಕರಣಾ ಘಟಕಗಳು ಮತ್ತು ನೈಸರ್ಗಿಕ ಅನಿಲ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ನಿರ್ಧಾರಕ್ಕೆ ಬಂದಿವೆ. ಈ
ಮಂಗಳವಾರ ನಡೆದ ದಾಳಿಯ ಆತಂಕದ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಮುಖ ತೈಲ ಸಂಸ್ಕರಣಾ ಘಟಕಗಳಲ್ಲಿ ಒಂದಾದ ರುವೈಸ್ ತೈಲ ಸಂಸ್ಕರಣಾ ಘಟಕವನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ. ಭದ್ರತಾ ಕಾರಣಗಳಿಂದಾಗಿ ಈ ಘಟಕದಲ್ಲಿ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಹಿಂದೆ ದೇಶದಲ್ಲಿ ದಿನಕ್ಕೆ ಸುಮಾರು 8 ಲಕ್ಷ ಬ್ಯಾರಲ್ ತೈಲ ಉತ್ಪಾದನೆ ನಡೆಯುತ್ತಿತ್ತು. ಆದರೆ ಭದ್ರತಾ ಕಾರಣಗಳು ಮತ್ತು ದಾಳಿಯ ಭೀತಿಯಿಂದ ಉತ್ಪಾದನೆಯನ್ನು 5 ಲಕ್ಷ ಬ್ಯಾರಲ್‌ಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಪೂರೈಕೆಗೆ ಮತ್ತಷ್ಟು ಒತ್ತಡ ಉಂಟಾಗುವ ಸಾಧ್ಯತೆ ಇದೆ.
ಇದೇ ರೀತಿಯಲ್ಲಿ ಕೊಲ್ಲಿ ಪ್ರದೇಶದ ಇತರ ರಾಷ್ಟ್ರಗಳೂ ಕೂಡ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ಕ್ರಮಕ್ಕೆ ಮುಂದಾಗಿವೆ. ಕುವೈತ್ ಸರ್ಕಾರವು ದಿನಕ್ಕೆ ಸುಮಾರು 5 ಲಕ್ಷ ಬ್ಯಾರಲ್ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿರುವುದಾಗಿ ಮಾಹಿತಿ ನೀಡಿದೆ. ಭದ್ರತಾ ಪರಿಸ್ಥಿತಿ ಸುಧಾರಿಸುವವರೆಗೂ ಈ ನಿರ್ಧಾರ ಮುಂದುವರಿಯುವ ಸಾಧ್ಯತೆ ಇದೆ.
ಇನ್ನೊಂದೆಡೆ, ಇರಾಕ್ ದೇಶವೂ ಕೂಡ ತೈಲ ಉತ್ಪಾದನೆಯಲ್ಲಿ ದೊಡ್ಡ ಮಟ್ಟದ ಕಡಿತ ಘೋಷಿಸಿದೆ. ವರದಿಗಳ ಪ್ರಕಾರ, ಇರಾಕ್ ದಿನಕ್ಕೆ ಸುಮಾರು 2.9 ದಶಲಕ್ಷ ಬ್ಯಾರಲ್ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಲಿದೆ..
ತೈಲ ಮಾತ್ರವಲ್ಲದೆ ನೈಸರ್ಗಿಕ ಅನಿಲ ಉತ್ಪಾದನೆಯ ಮೇಲೂ ಈ ಉದ್ವಿಗ್ನತೆ ಪರಿಣಾಮ ಬೀರಿದೆ. ಕತಾರ್ ಸೇರಿದಂತೆ ಹಲವಾರು ಕೊಲ್ಲಿ ರಾಷ್ಟ್ರಗಳು ತಮ್ಮ ನೈಸರ್ಗಿಕ ಅನಿಲ ಉತ್ಪಾದನಾ ಘಟಕಗಳಲ್ಲಿ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ. ವಿಶ್ವದ ಪ್ರಮುಖ ಅನಿಲ ಪೂರೈಕೆದಾರರಲ್ಲಿ ಕತಾರ್ ಒಂದು ಪ್ರಮುಖ ದೇಶವಾಗಿರುವುದರಿಂದ ಈ ಬೆಳವಣಿಗೆ ಜಾಗತಿಕ ಅನಿಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
