ಜಕಾರ್ತ: ಪ್ರಕೃತಿ ವಿಕೋಪಗಳಿಗೆ ಪದೇ ಪದೇ ತುತ್ತಾಗುವ ಇಂಡೋನೇಷ್ಯಾದಲ್ಲಿ ಗುರುವಾರ ಮುಂಜಾನೆ ಭೀಕರ ಭೂಕಂಪ ಸಂಭವಿಸಿದೆ. ಮೊಲುಕ್ಕಾ ಸಮುದ್ರದ ಆಳದಲ್ಲಿ ಸೃಷ್ಟಿಯಾದ ಈ ಕಂಪನವು ರಿಕ್ಟರ್ ಮಾಪಕದಲ್ಲಿ 7.8 ರಷ್ಟು ತೀವ್ರತೆ ದಾಖಲಿಸಿದ್ದು, ಆಗ್ನೇಯ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಸುನಾಮಿ ಅಪ್ಪಳಿಸುವ ಭೀತಿ ಎದುರಾಗಿದೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ವರದಿಯ ಪ್ರಕಾರ, ಸ್ಥಳೀಯ ಕಾಲಮಾನ ಮುಂಜಾನೆ 4:18ಕ್ಕೆ ಭೂಮಿ ಪ್ರಬಲವಾಗಿ ನಡುಗಿದೆ. ಇಂಡೋನೇಷ್ಯಾದ ಟೆರ್ನೇಟ್‌ನಿಂದ ಪಶ್ಚಿಮ-ವಾಯುವ್ಯಕ್ಕೆ ಸುಮಾರು 119 ಕಿಮೀ ದೂರದಲ್ಲಿರುವ ‘ಮಾಜು’ ದ್ವೀಪದ ಬಳಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಈ ಕಂಪನವು ಭೂಮಿಯ ಮೇಲ್ಮೈಯಿಂದ ಕೇವಲ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿರುವುದು ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಕಡಿಮೆ ಆಳದಲ್ಲಿ ಸಂಭವಿಸುವ ಭೂಕಂಪಗಳು ಮೇಲ್ಮೈನಲ್ಲಿ ಅತಿ ಹೆಚ್ಚು ಹಾನಿಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿರುತ್ತವೆ.
ಭೂಕಂಪದ ತೀವ್ರತೆಯನ್ನು ಗಮನಿಸಿ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ತಕ್ಷಣವೇ ಮುನ್ನೆಚ್ಚರಿಕೆ ನೀಡಿದೆ. ಭೂಕಂಪದ ಕೇಂದ್ರಬಿಂದುವಿನಿಂದ 1,000 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಮಲೇಷ್ಯಾದ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಲೆಗಳು ಅಪ್ಪಳಿಸುವ ಅಪಾಯವಿದೆ. ಸಮುದ್ರ ಮಟ್ಟದಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ ಕರಾವಳಿ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ ಭಾರತದ ಕರಾವಳಿ ತೀರಕ್ಕೆ ಯಾವುದೇ ಸುನಾಮಿ ಭೀತಿಯಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಉತ್ತರ ಸುಲಾವೇಸಿ ಪ್ರಾಂತ್ಯದ ಮನಡೋ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಭೂಕಂಪದ ತೀವ್ರತೆ ಜೋರಾಗಿತ್ತು. ಗಾಢ ನಿದ್ರೆಯಲ್ಲಿದ್ದ ಜನರು ಮನೆಗಳು ನಡುಗುತ್ತಿದ್ದಂತೆ ಗಾಬರಿಯಿಂದ ರಸ್ತೆಗಳಿಗೆ ಧಾವಿಸಿದರು. ನಿದ್ರೆಯಲ್ಲಿದ್ದಾಗ ಮಂಚ ಜೋರಾಗಿ ಅಲುಗಾಡಲು ಶುರುವಾಯಿತು, ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಎಲ್ಲರೂ ಕಿರುಚುತ್ತಾ ಹೊರಗೆ ಓಡುತ್ತಿದ್ದೆವು ಎಂದು ಸ್ಥಳೀಯರೊಬ್ಬರು ತಮ್ಮ ಭೀಕರ ಅನುಭವ ಹಂಚಿಕೊಂಡಿದ್ದಾರೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ನಿವಾಸಿಗಳು ಮೈದಾನಗಳಲ್ಲಿ ಆಶ್ರಯ ಪಡೆದಿದ್ದಾರೆ. ಅದೃಷ್ಟವಶಾತ್, ಸದ್ಯಕ್ಕೆ ಯಾವುದೇ ದೊಡ್ಡ ಮಟ್ಟದ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.
‘ರಿಂಗ್ ಆಫ್ ಫೈರ್’ ಮತ್ತು ಇಂಡೋನೇಷ್ಯಾದ ಇತಿಹಾಸ
ಇಂಡೋನೇಷ್ಯಾ ದೇಶವು ಪೆಸಿಫಿಕ್ ‘ರಿಂಗ್ ಆಫ್ ಫೈರ್’ ವಲಯದಲ್ಲಿದೆ. ಇಲ್ಲಿ ಟೆಕ್ಯಾನಿಕ್ ಪ್ಲೇಟ್‌ಗಳು ನಿರಂತರವಾಗಿ ಚಲಿಸುತ್ತಿರುವುದರಿಂದ ಭೂಕಂಪ ಮತ್ತು ಜ್ವಾಲಾಮುಖಿ ಸ್ಫೋಟಗಳು ಸಾಮಾನ್ಯ.
-
2004: ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ 9.1 ತೀವ್ರತೆಯ ಭೂಕಂಪ ಮತ್ತು ಸುನಾಮಿ ಅಚೆ ಪ್ರಾಂತ್ಯ ಸೇರಿದಂತೆ 12 ದೇಶಗಳಲ್ಲಿ 2.30 ಲಕ್ಷಕ್ಕೂ ಹೆಚ್ಚು ಬಲಿ ಪಡೆದಿತ್ತು.
-
2022: ಪಶ್ಚಿಮ ಜಾವಾದಲ್ಲಿ ಸಂಭವಿಸಿದ ಭೂಕಂಪಕ್ಕೆ 600ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಸದ್ಯ ಮಲೇಷ್ಯಾ ಮತ್ತು ಫಿಲಿಪೈನ್ಸ್ ಸರ್ಕಾರಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ರಕ್ಷಣಾ ಪಡೆಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಹೈ ಅಲರ್ಟ್‌ನಲ್ಲಿವೆ.





