ಭಾರತ: ಜಗತ್ತಿನ ಅತ್ಯಂತ ಬಲಾಢ್ಯ ದೇಶಗಳಲ್ಲಿ ಒಂದಾಗಿರುವ ಭಾರತ, ಇಂದು ಪ್ರಪಂಚದ ಕಣ್ಣಿನಲ್ಲಿ ತನ್ನದೇ ಆದ ಗೌರವವನ್ನು ಹೊಂದಿದೆ. ಯಾರ ತಂಟೆಗೂ ಹೋಗದ ಭಾರತ, ತನ್ನ ತಂಟೆಗೆ ಬಂದರೆ ಯಾರೇ ಆದರೂ ಸರಿ ಸುಮ್ಮನೆ ಬಿಡುವುದಿಲ್ಲ ಎಂಬಂತಹ ದಿಟ್ಟ ನಿಲುವನ್ನು ಹೊಂದಿದೆ. ಇಂತಹ ಶಕ್ತಿಶಾಲಿ ರಾಷ್ಟ್ರ ಇದೀಗ ಜಗತ್ತಿನ ಎರಡು ಪ್ರಮುಖ ದೇಶಗಳ ನಡುವಿನ ಯುದ್ಧಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಭಾರತದ ನೇತೃತ್ವದಲ್ಲಿ ಸಂಧಾನ: ಮೂಲಗಳ ಪ್ರಕಾರ, ಕಳೆದ 4 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ನಡುವಿನ ಭೀಕರ ಯುದ್ಧವನ್ನು ನಿಲ್ಲಿಸಲು ಭಾರತವು ಪ್ರಮುಖ ಮಧ್ಯಸ್ಥಿಕೆದಾರನಾಗಿ (ರಾಯಭಾರಿಯಾಗಿ) ತನ್ನನ್ನು ತಾನು ಗುರುತಿಸಿಕೊಳ್ಳಲು ಮುಂದಾಗುತ್ತಿದೆ ಎಂಬ ಮಾತುಗಳು ರಾಜತಾಂತ್ರಿಕ ವಲಯದಲ್ಲಿ ಕೇಳಿಬರುತ್ತಿವೆ.
ನಿರಂತರ ಯುದ್ಧದಿಂದಾಗಿ ಬಳಲಿದೆ ಇಡೀ ಜಗತ್ತು: ಯುದ್ಧ… ಯುದ್ಧ… ಯುದ್ಧ… ಇತ್ತೀಚೆಗೆ ಈ ಪದವನ್ನು ಕೇಳಿದರೆ ಸಾಕು ಜನರು ಮೂಗು ಮುರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಯುದ್ಧದಿಂದ ಕೇವಲ 1 ಪರ್ಸೆಂಟ್ ಲಾಭವಾದರೆ, 99 ಪರ್ಸೆಂಟ್ ನಷ್ಟವೇ ಆಗುತ್ತದೆ. ಒಂದು ಕಡೆ ಇರಾನ್-ಅಮೆರಿಕಾ, ಮತ್ತೊಂದೆಡೆ ರಷ್ಯಾ-ಉಕ್ರೇನ್ ಹಾಗೂ ಇಸ್ರೇಲ್ ಹೀಗೆ ಜಗತ್ತಿನ ಬಲಿಷ್ಠ ರಾಷ್ಟ್ರಗಳೇ ಯುದ್ಧದ ಸುಳಿಗೆ ಸಿಲುಕಿದ್ದು, ಇಡೀ ಜಗತ್ತು ರಣರಂಗದಂತಾಗಿದೆ. ಇದರಿಂದಾಗಿ ನಿತ್ಯ ಬಳಕೆಯ ಆಹಾರ ಸಾಮಗ್ರಿಗಳು, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಸಿ ಪದಾರ್ಥಗಳ ಪೂರೈಕೆಯಲ್ಲೂ ವ್ಯತ್ಯಯವಾಗಿ ಜನಸಾಮಾನ್ಯರು ಪರದಾಡುವಂತಾಗಿದೆ.
ಭಾರತಕ್ಕೂ ತಟ್ಟಿದ ಯುದ್ಧದ ಬಿಸಿ: ಈ ಜಾಗತಿಕ ಸಂಘರ್ಷದ ಎಫೆಕ್ಟ್ ಭಾರತಕ್ಕೂ ತಟ್ಟಿದ್ದು, ದೇಶದಲ್ಲಿ ಇಂಧನ ಹಾಗೂ ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗಿದೆ.
ಇಷ್ಟೆಲ್ಲಾ ಸವಾಲುಗಳ ನಡುವೆ, ಯುದ್ಧದ ಕಾವಿನಿಂದ ಬಳಲುತ್ತಿರುವ ರಷ್ಯಾ ಹಾಗೂ ಉಕ್ರೇನ್ ಈ ಎರಡೂ ದೇಶಗಳಿಗೂ ಆಪ್ತ ಸ್ನೇಹಿತನಾಗಿರುವ ಭಾರತ, “ಶಾಂತಿ ಸ್ಥಾಪನೆಗಾಗಿ ತಾನು ಸಂಪರ್ಕ ಸೇತುವೆಯಾಗಲು ಸಿದ್ಧನಿದ್ದೇನೆ” ಎಂಬ ಸಂದೇಶವನ್ನು ರವಾನಿಸಿದೆ. ಇದೀಗ ರಷ್ಯಾ ಮತ್ತು ಉಕ್ರೇನ್ ದೇಶಗಳು ಯುದ್ಧ ನಿಲ್ಲಿಸಲು ಭಾರತದ ಈ ರಾಜತಾಂತ್ರಿಕ ನಡೆಗೆ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.
