ಇರಾನ್‌ನಲ್ಲಿ ಹೆಚ್ಚಿದ ಜನಾಕ್ರೋಶ: ಸಾವಿನ ಸಂಖ್ಯೆ 3,428 ಕ್ಕೆ ಏರಿಕೆ

Untitled design 2026 01 15T162553.134

ತೆಹ್ರಾನ್: ಇರಾನ್‌ನಲ್ಲಿ ಸರ್ವಾಧಿಕಾರಿ ಆಲಿ ಖಮೇನಿ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಈಗ ಕೇವಲ ಆ ದೇಶಕ್ಕೆ ಸೀಮಿತವಾಗದೆ, ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿವೆ. ಅಮೆರಿಕದ ನೇರ ಮಧ್ಯಪ್ರವೇಶದ ಎಚ್ಚರಿಕೆ ಮತ್ತು ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಇರಾನ್‌ನಲ್ಲಿ ಯುದ್ಧದ ಭೀತಿ ಎದುರಾಗಿದೆ.

ಇರಾನ್‌ನಲ್ಲಿ ಸುಪ್ರೀಂ ಲೀಡರ್ ಆಲಿ ಖಮೇನಿ ವಿರುದ್ಧ ಬೀದಿಗಿಳಿದಿರುವ ಜನರ ಮೇಲೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹ್ಯೂಮನ್ ರೈಟ್ಸ್ ಆಕ್ಟಿವಿಸ್ಟ್ಸ್ ನ್ಯೂಸ್ ಏಜೆನ್ಸಿ ಮತ್ತು IHR ವರದಿಗಳ ಪ್ರಕಾರ, ಜನವರಿ 8 ರಿಂದ 12 ರ ನಡುವೆ ನಡೆದ ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ 3,400 ದಾಟಿದೆ. 15,000ಕ್ಕೂ ಹೆಚ್ಚು ನಾಗರಿಕರನ್ನು ಬಂಧಿಸಲಾಗಿದ್ದು, ಇರಾನ್ ಸರ್ಕಾರವು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮರಣದಂಡನೆ ನೂಈಡುತ್ತಿದೆ ಎಂದು ಆರೋಪ ಕೇಳಿಬಂದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಭಟನಾಕಾರರ ಮೇಲೆ ಹಲ್ಲೆ ಅಥವಾ ಗಲ್ಲು ಶಿಕ್ಷೆ ಮುಂದುವರಿಸಿದರೆ ಮಿಲಿಟರಿ ಹಸ್ತಕ್ಷೇಪ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕತಾರ್‌ನಲ್ಲಿರುವ ಅಮೆರಿಕದ ಏರ್ ಬೇಸ್ ಮೂಲಕ ವಾಯುದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವದಂತಿಗಳ ಬೆನ್ನಲ್ಲೇ ಇರಾನ್ ತುಸು ಸೈಲೆಂಟ್‌ ಆದಂತೆ ಕಾಣುತ್ತಿದೆ. ಸಚಿವ ಅಬ್ಬಾಸ್ ಅರಘ್ಚಿ ಅವರು ಸದ್ಯಕ್ಕೆ ಯಾವುದೇ ಮರಣದಂಡನೆಗಳನ್ನು ಜಾರಿಗೊಳಿಸುವ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೂ, ಒಳಗೊಳಗೆ ಯುದ್ದದ ಸಿದ್ಧತೆ ನಡೆಸಿರುವ ಇರಾನ್, ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದೆ. ಒಂದು ವೇಳೆ ಅಮೆರಿಕ ದಾಳಿ ಮಾಡಿದರೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮೂರು ಪ್ರಮುಖ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕತಾರ್ ಸರ್ಕಾರ, ಅಲ್ ಉದೈದ್ ವಾಯುನೆಲೆಯಿಂದ ಕೆಲವು ಸಿಬ್ಬಂದಿಗಳನ್ನು ತೆರವುಗೊಳಿಸಲು ಸೂಚಿಸಿದೆ ಎಂದು ವರದಿಯಾಗಿದೆ.

ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರತ ಸೇರಿದಂತೆ ಹಲವು ದೇಶಗಳ ವಿಮಾನಯಾನದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಏರ್ ಇಂಡಿಯಾ ಮತ್ತು ಇಂಡಿಗೋ ಸಂಸ್ಥೆಗಳು ತಮ್ಮ ಅಂತರಾಷ್ಟ್ರೀಯ ವಿಮಾನಗಳಿಗೆ ಪರ್ಯಾಯ ಮಾರ್ಗಗಳನ್ನು ಬಳಸುತ್ತಿವೆ. ಇದರಿಂದಾಗಿ ಪ್ರಯಾಣದ ಅವಧಿ ಹೆಚ್ಚಾಗಲಿದ್ದು, ವಿಳಂಬ ಅನಿವಾರ್ಯವಾಗಿದೆ ಎಂದು ಪ್ರಯಾಣಿಕರಿಗೆ ತಿಳಿಸಿವೆ.

ಭಾರತೀಯರಿಗೆ ಎಚ್ಚರಿಕೆ

ಇರಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ತನ್ನ ಪ್ರಜೆಗಳಿಗೆ ತುರ್ತು ಸೂಚನೆ ನೀಡಿದೆ. ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಕೂಡಲೇ ದೇಶ ತೊರೆಯುವಂತೆ ಮತ್ತು ಪ್ರತಿಭಟನಾ ಸ್ಥಳಗಳಿಂದ ದೂರವಿರುವಂತೆ ತಿಳಿಸಲಾಗಿದೆ.

ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಸ್ಥಿರತೆ ಕಾಪಾಡುವ ಬಗ್ಗೆ ಮತ್ತು ಇರಾನ್‌ನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಜೈಶಂಕರ್ ಮಾಹಿತಿ ಪಡೆದಿದ್ದಾರೆ.

 

Exit mobile version