ಜಕಾರ್ತ: ಹೆಲಿಕಾಪ್ಟರ್‌ವೊಂದು ಇಂಡೋನೇಷ್ಯಾದ ಬೋರ್ನಿಯೋ ದ್ವೀಪದ ಮೇಲೆ ಹಾರುತ್ತಿದ್ದಾಗ ಭಾರತೀಯ ಪ್ರಜೆ, ಸೇರಿದಂತೆ 8 ಜನರೊಂದಿಗೆ ನಾಪತ್ತೆಯಾಗಿದೆ. ಸೋಮವಾರ ನಾಪತ್ತೆಯಾಗಿದ್ದ ಈ ಹೆಲಿಕಾಪ್ಟರ್ ಪತ್ತೆಗಾಗಿ ಮಂಗಳವಾರವು ಶೋಧ ಕಾರ್ಯಾಚರಣೆ ನಡೆದಿದೆ.
ಎಸ್ಟಿಂಡೋ ಏರ್ ಬಿಕೆ 117 ಡಿ3 ಹೆಲಿಕಾಪ್ಟರ್ ಇದಾಗಿದ್ದು, ಸೌತ್ ಕಾಲಿಮಂಟನ್ ಪ್ರಾಂತ್ಯದ ಮೆಂಟೆವೆಯ ಮಂಡಿನ್ ದಮರ್ ಜಲಪಾತದ ಬಳಿ ಸಂಪರ್ಕ ಕಳೆದುಕೊಂಡಿತ್ತು. ಪೈಲಟ್ ಸೇರಿದಂತೆ ಒಟ್ಟು 6 ರಿಂದ 8 ಜನರನ್ನು ಹೊತ್ತೊಯ್ಯುತ್ತಿತ್ತು. ಇನ್ನೂ ಅದರಲ್ಲಿದ್ದ ವ್ಯಕ್ತಿಗಳಾದ ಕ್ಯಾಪ್ಟನ್ ಹರ್ಯಾಂಟೊ, ಎಂಗ್ ಹೆಂಡ್ರಾ, ಮಾರ್ಕ್ ವೆರೆನ್, ಯುಡಿ ಫೆಬ್ರಿಯನ್, ಆಂಡಿಸ್ ರಿಸ್ಸಾ ಪಸುಲು, ಕ್ಲೌಡಿನ್ ಕ್ವಿಟೊ ಮತ್ತು ಭಾರತೀಯ ಮೂಲದ ಇಬಾಯ್ ಇರ್ಫಾನ್ ರೋಸಾ ಎಂದು ಗುರುತಿಸಲಾಗಿದೆ.
ಈ ಬಗ್ಗೆ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಐ ಪುಟು ಸುದಯಾನ ಮಾತನಾಡಿ, ಈಗಾಗಲೇ ವಿವಿಧ ಏಜೆನ್ಸಿಗಳಿಂದ ಶೋಧ ಮುಂದವರೆದಿದೆ. 2 ಹೆಲಿಕಾಪ್ಟರ್ ಸಹಾಯದಿಂದ ವೈಮಾನಿಕ ಶೋಧ ಕಾರ್ಯ ಆರಂಭವಾಗಿದ್ದು, 140 ಸ್ವಯಂಸೇವಕರಿಂದ ಭೂ ಹುಡುಕಾಟ ಕೂಡಾ ನಡೆದಿದೆ . ಈಗಾಗಲೇ ಈ ಜಂಟಿ ತಂಡವು 27 ಚದರ ಕಿಲೋಮೀಟರ್ ಪ್ರದೇಶದ ಹುಡುಕಾಟ ನಡೆಸಿದೆ ಎಂದು ವರದಿಯಾಗಿದೆ.
 
			
 
					




 
                             
                             
                             
                             
                            