ಜೆರುಸಲೇಂ: ಮನುಷ್ಯತ್ವವನ್ನು ಮರೆತಾಗ ಯುದ್ಧದ ಭೀಕರತೆ ಎಂತಹ ರೂಪ ತಾಳುತ್ತದೆ ಎಂಬುದಕ್ಕೆ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ ಸಾಕ್ಷಿಯಾಗಿದೆ. ದಶಕಗಳಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಭೂಮಿ, ಅಸ್ತಿತ್ವ, ಮತ್ತು ಗುರುತಿಗಾಗಿ ನಡೆಯುತ್ತಿರುವ ಹೋರಾಟವು ಮನುಷ್ಯತ್ವವನ್ನು ಕಸಿದುಕೊಂಡಿದೆ. ಇದಕ್ಕೆ ಉದಾಹರಣೆಯಾಗಿ, ಹಮಾಸ್ ಬಿಡುಗಡೆ ಮಾಡಿರುವ ಒಂದು ಭೀಕರ ವಿಡಿಯೋ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋದಲ್ಲಿ ಇಸ್ರೇಲಿ ಒತ್ತೆಯಾಳುವೋರ್ವ ತನ್ನದೇ ಸಮಾಧಿಯನ್ನು ತೋಡುತ್ತಿರುವ ದೃಶ್ಯ ಸೆರೆಯಾಗಿದೆ.
24 ವರ್ಷದ ಎವ್ಯಾಟರ್ ಡೇವಿಡ್ ಎಂದು ಗುರುತಿಸಲಾದ ಈ ಒತ್ತೆಯಾಳು, ಭೂಗತ ಸುರಂಗದಲ್ಲಿ ಜೀವಂತ ಅಸ್ಥಿಪಂಜರದಂತೆ ಕಾಣುತ್ತಿದ್ದಾನೆ. ತನ್ನ ಸಮಾಧಿಯನ್ನು ಅಗೆಯುತ್ತಿರುವಾಗ ಮಾತನಾಡಲೂ ಶಕ್ತಿಯಿಲ್ಲದೇ ಕುಸಿದು ಬೀಳುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸಿವೆ. 48 ಗಂಟೆಗಳ ಒಳಗೆ ಎವ್ಯಾಟರ್‌ನ ಎರಡನೇ ವಿಡಿಯೋವನ್ನು ಹಮಾಸ್ ಬಿಡುಗಡೆ ಮಾಡಿದೆ.
ಡೇವಿಡ್‌ನ ರೋದನೆಯ ಧ್ವನಿಯು ಯಾವುದೇ ಕಲ್ಲು ಹೃದಯವನ್ನೂ ಕರಗಿಸುವಂತಿದೆ. “ನಾನು ನನ್ನದೇ ಸಮಾಧಿಯನ್ನು ತೋಡುತ್ತಿದ್ದೇನೆ. ನನ್ನ ದೇಹ ದಿನೇ ದಿನೇ ದುರ್ಬಲವಾಗುತ್ತಿದೆ. ಶೀಘ್ರದಲ್ಲೇ ನಾನು ಈ ಸಮಾಧಿಯೊಳಗೆ ಸೇರಲಿದ್ದೇನೆ. ನನ್ನ ಕುಟುಂಬದೊಂದಿಗೆ ಮನೆಗೆ ಮರಳುವ ಆಸೆ ಕ್ಷೀಣಿಸುತ್ತಿದೆ,” ಎಂದು ಎವ್ಯಾಟರ್ ಹಿಬ್ರೂ ಭಾಷೆಯಲ್ಲಿ ಹೇಳುವಾಗ ಅವನ ಕಣ್ಣೀರು ಜಗತ್ತಿನ ಗಮನ ಸೆಳೆದಿದೆ.
ಎವ್ಯಾಟರ್‌ನ ಕುಟುಂಬವು ಈ ವಿಡಿಯೋದಲ್ಲಿರುವ ವ್ಯಕ್ತಿ ತಮ್ಮ ಮಗನೇ ಎಂದು ದೃಢಪಡಿಸಿದೆ. “ಹಮಾಸ್ ನಮ್ಮ ಮಗನನ್ನು ಉದ್ದೇಶಪೂರ್ವಕವಾಗಿ ಹಸಿವಿನಿಂದ ಸಾಯಿಸುತ್ತಿದೆ. ಇದು ಜಗತ್ತಿನ ಅತ್ಯಂತ ಕ್ರೂರ ಕೃತ್ಯಗಳಲ್ಲಿ ಒಂದಾಗಿದೆ. ಈ ಕೃತ್ಯಕ್ಕೆ ದೇವರೇ ಶಿಕ್ಷೆ ನೀಡಲಿದ್ದಾನೆ,” ಎಂದು ಕುಟುಂಬದವರು ಕಣ್ಣೀರಿಡುತ್ತಾ ಹೇಳಿದ್ದಾರೆ.
How psychopathic is Hamas?
It forced starving hostage Evyatar David to DIG HIS OWN GRAVE for the cameras. pic.twitter.com/iMa404St4s
— Eylon Levy (@EylonALevy) August 2, 2025
2023ರ ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ದಾಳಿಯಲ್ಲಿ 1,219 ಜನರು ಕೊಲೆಯಾಗಿದ್ದು, ನೂರಾರು ಇಸ್ರೇಲಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿತ್ತು. ಗಾಜಾದಲ್ಲಿ 49 ಒತ್ತೆಯಾಳುಗಳು ಇದ್ದು, ಎವ್ಯಾಟರ್ ಡೇವಿಡ್ ಇವರಲ್ಲಿ ಒಬ್ಬ. ಇವರ ಮೇಲೆ ಹಮಾಸ್ ಕ್ರೂರವಾಗಿ ವರ್ತಿಸುತ್ತಿದೆ ಎಂಬ ಆರೋಪವಿದೆ. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಗಾಜಾದ ಮೇಲೆ ನಡೆಸುತ್ತಿರುವ ದಾಳಿಯಲ್ಲಿ 60,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಈ ವಿಡಿಯೋ ಬಿಡುಗಡೆಯಾದ ಕೂಡಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎವ್ಯಾಟರ್‌ನ ಕುಟುಂಬದೊಂದಿಗೆ ಮಾತನಾಡಿದ್ದಾರೆ. “ಈ ದೃಶ್ಯಗಳು ನನ್ನನ್ನು ತೀವ್ರವಾಗಿ ಕಾಡಿವೆ. ಎವ್ಯಾಟರ್ ಸೇರಿದಂತೆ ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಸರ್ಕಾರ ಶ್ರಮಿಸುತ್ತಿದೆ,” ಎಂದು ಅವರು ಭರವಸೆ ನೀಡಿದ್ದಾರೆ. “ಹಮಾಸ್‌ನ ಈ ಕ್ರೂರತೆಗೆ ಒಂದಿಲ್ಲ ಒಂದು ದಿನ ಶಿಕ್ಷೆ ಎದುರಾಗಲಿದೆ,” ಎಂದು ನೆತನ್ಯಾಹು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಮಾಸ್ ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೋದಲ್ಲಿ 21 ವರ್ಷದ ಜರ್ಮನ್-ಇಸ್ರೇಲಿ ಪ್ರಜೆ ರೋಮ್ ಬ್ರಾಸ್ಲಾವಿ ಕೂಡ ಭೀಕರ ಪರಿಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾನೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಟೆಲ್ ಅವಿವ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಒತ್ತೆಯಾಳುಗಳ ಬಿಡುಗಡೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.
