ಜರ್ಮನಿಯಲ್ಲಿ ಗುಂಡಿನ ದಾಳಿ: 6 ಮಂದಿ ಸಾ*ವು, ಇಬ್ಬರ ಬಂಧನ

Untitled design 2026 06 29T215837.953

ಉತ್ತರ ಜರ್ಮನಿಯ ಸ್ಟೇಡ್ (Stade) ಪಟ್ಟಣದಲ್ಲಿ ಇಂದು ಸೋಮವಾರ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಈ ಭೀಕರ ಘಟನೆಯ ಬಳಿಕ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಸ್ಥಳೀಯ ಮಾಧ್ಯಮಗಳ ವರದಿ ಹಾಗೂ ಪೊಲೀಸ್ ಮಾಹಿತಿಯ ಪ್ರಕಾರ, ಸ್ಟೇಡ್ ನಗರದ ಡಾಂಕರ್ಸ್‌ಸ್ಟ್ರಾಸ್ಸೆ ರಸ್ತೆಯಲ್ಲಿರುವ ಯುವ ಕಲ್ಯಾಣ ಕೇಂದ್ರದ ಸಮೀಪ ಈ ಗುಂಡಿನ ದಾಳಿ ನಡೆದಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಪೊಲೀಸರು, ತುರ್ತು ವೈದ್ಯಕೀಯ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡವು.

ಪ್ರಾಥಮಿಕ ಮಾಹಿತಿ ಪ್ರಕಾರ, ಘಟನೆಯಲ್ಲಿ ಐವರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಮೃತರ ಗುರುತು, ವಯಸ್ಸು ಹಾಗೂ ಅವರು ಸ್ಥಳೀಯ ನಿವಾಸಿಗಳೇ ಅಥವಾ ಬೇರೆ ಪ್ರದೇಶದವರೇ ಎಂಬುದರ ಕುರಿತು ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟೇಡ್ ಪಟ್ಟಣವು ಉತ್ತರ ಜರ್ಮನಿಯ ಪ್ರಮುಖ ನಗರವಾದ ಹ್ಯಾಂಬರ್ಗ್‌ನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದ್ದು, ಸುಮಾರು 50 ಸಾವಿರ ಜನಸಂಖ್ಯೆ ಹೊಂದಿದೆ. ಘಟನೆಯ ನಂತರ ಸಂಪೂರ್ಣ ಪ್ರದೇಶವನ್ನು ಸೀಲ್ ಮಾಡಲಾಗಿದ್ದು, ವಿಧಿವಿಜ್ಞಾನ (ಫೋರೆನ್ಸಿಕ್) ತಜ್ಞರು ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಗುಂಡಿನ ದಾಳಿಯ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈಯಕ್ತಿಕ ವೈಷಮ್ಯ, ಸಂಘಟಿತ ಅಪರಾಧ ಅಥವಾ ಇತರ ಯಾವುದೇ ಕಾರಣ ಇದಕ್ಕೆ ಹಿನ್ನೆಲೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಇಬ್ಬರು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಜರ್ಮನಿಯಲ್ಲಿ ನಡೆದ ಹಲವು ಹಿಂಸಾತ್ಮಕ ಘಟನೆಗಳ ಬಳಿಕ ಈ ದಾಳಿ ಮತ್ತೊಮ್ಮೆ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ. 2025ರ ಫೆಬ್ರವರಿಯಲ್ಲಿ ಬಿಲೆಫೆಲ್ಡ್ ನ್ಯಾಯಾಲಯದ ಬಳಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದರು. ಅದಕ್ಕೂ ಮೊದಲು 2024ರ ಡಿಸೆಂಬರ್‌ನಲ್ಲಿ ಮ್ಯಾಗ್ಡೆಬರ್ಗ್‌ನ ಕ್ರಿಸ್‌ಮಸ್ ಮಾರುಕಟ್ಟೆಗೆ ಕಾರು ನುಗ್ಗಿಸಿದ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದರು.

ಇತ್ತೀಚಿನ ಸ್ಟೇಡ್ ಗುಂಡಿನ ದಾಳಿಯು ಜರ್ಮನಿಯಲ್ಲಿ ಭದ್ರತಾ ವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ತನಿಖೆ ಪೂರ್ಣಗೊಂಡ ಬಳಿಕ ದಾಳಿಯ ನಿಖರ ಕಾರಣ ಹಾಗೂ ಬಲಿಪಶುಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

Exit mobile version