ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಇರಾನ್ ವಿರುದ್ಧ ಯುದ್ಧ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಇಸ್ಲಾಮಿಕ್ ಗಣರಾಜ್ಯಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು (Strait of Hormuz) ತಕ್ಷಣವೇ ಮುಕ್ತಗೊಳಿಸಿ, ಇಲ್ಲದಿದ್ದರೆ ಭಾರಿ ಅಪಾಯ ಎದುರಿಸಲು ಸಿದ್ಧರಾಗಿ. ನಿಮಗೆ ಕೇವಲ 48 ಗಂಟೆಗಳ ಕಾಲಾವಕಾಶ ನೀಡುತ್ತಿದ್ದೇನೆ ಎಂದು ಟ್ರಂಪ್ ಗುಡುಗಿದ್ದಾರೆ.
ತಮ್ಮದೇ ಆದ ‘ಟ್ರೂತ್ ಸೋಶಿಯಲ್’ (Truth Social) ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, ಇರಾನ್ ಮೇಲೆ ಒತ್ತಡ ಹೇರಿದ್ದಾರೆ. ಒಪ್ಪಂದ ಮಾಡಿಕೊಳ್ಳಲು ಮತ್ತು ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ನಾನು ಹತ್ತು ದಿನಗಳ ಕಾಲಾವಕಾಶ ನೀಡಿದ್ದನ್ನು ನೆನಪಿರಲಿ. ಈಗ ಆ ಸಮಯ ಮುಗಿಯುತ್ತಾ ಬಂದಿದೆ. ಇನ್ನು ಕೇವಲ 48 ಗಂಟೆಗಳು ಮಾತ್ರ ಬಾಕಿ ಇವೆ ಎಂದು ಅವರು ಎಚ್ಚರಿಸಿದ್ದಾರೆ. ಮಾರ್ಚ್ 26 ರಂದೇ ಟ್ರಂಪ್ ಮೊದಲ ಬಾರಿಗೆ ಈ ಡೆಡ್‌ಲೈನ್ ನೀಡಿದ್ದರು, ಆದರೆ ಇರಾನ್‌ನ ಮನವಿಯ ಮೇರೆಗೆ ಅದನ್ನು ಸ್ವಲ್ಪ ಮಟ್ಟಿಗೆ ಮುಂದೂಡಲಾಗಿತ್ತು.
ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮುಂದಿಟ್ಟಿದ್ದ ಶಾಂತಿ ಪ್ರಸ್ತಾಪವನ್ನು ಇರಾನ್ ಸರ್ಕಾರವು ‘ಏಕಪಕ್ಷೀಯ ನಿರ್ಧಾರ’ ಎಂದು ಕರೆದು ತಿರಸ್ಕರಿಸಿದೆ. ಇದರಿಂದ ಕೆರಳಿರುವ ಟ್ರಂಪ್, ಈಗ ಯುದ್ದದ ಮೂಲಕವೇ ಇರಾನ್ ಅನ್ನು ಹತೋಟಿಗೆ ತರಲು ಮುಂದಾಗಿದ್ದಾರೆ. ಆದರೆ, ವಾಸ್ತವದಲ್ಲಿ ಅಮೆರಿಕ ಅಂದುಕೊಂಡಷ್ಟು ಸುಲಭವಾಗಿ ಇರಾನ್ ಶರಣಾಗುತ್ತಿಲ್ಲ ಎಂಬುದು ಜಗತ್ತಿಗೆ ಸ್ಪಷ್ಟವಾಗುತ್ತಿದೆ.
‘ಆಪರೇಷನ್ ಎಪಿಕ್ ಪ್ಯೂರಿ’
ಇಸ್ರೇಲ್ ಜೊತೆಗೂಡಿ ಅಮೆರಿಕ ಆರಂಭಿಸಿದ ‘ಆಪರೇಷನ್ ಎಪಿಕ್ ಪ್ಯೂರಿ’ (Operation Epic Fury) ಕಾರ್ಯಾಚರಣೆಯು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಯುದ್ಧ ಆರಂಭವಾಗಿ ಒಂದು ತಿಂಗಳು ಕಳೆದರೂ ಅಮೆರಿಕಕ್ಕೆ ಭಾರೀ ನಷ್ಟ ಉಂಟಾಗಿದೆ. ಇರಾನ್‌ನ ಅತ್ಯಾಧುನಿಕ ಕ್ಷಿಪಣಿಗಳು ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಮಳೆಯಂತೆ ಸುರಿಯುತ್ತಿವೆ. ಕೇವಲ ಒಂದು ವಾರದಲ್ಲಿ ಯುದ್ಧ ಮುಗಿಯುತ್ತದೆ ಎಂದು ಭಾವಿಸಿದ್ದ ಟ್ರಂಪ್‌ಗೆ ಇರಾನ್ ಪ್ರಬಲ ಪ್ರತಿರೋಧ ಒಡ್ಡುತ್ತಿದೆ. ವಿಶ್ವದ ಮಹಾಶಕ್ತಿ ಎಂದು ಕರೆಸಿಕೊಳ್ಳುವ ಅಮೆರಿಕವೇ ಈಗ ಇರಾನ್ ಹೂಡಿರುವ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದೆ.
ಹಾರ್ಮುಜ್ ಜಲಸಂಧಿಯು ಜಗತ್ತಿನ ಕಚ್ಚಾ ತೈಲ ಪೂರೈಕೆಯ ಪ್ರಮುಖ ಕೇಂದ್ರವಾಗಿದೆ. ಇರಾನ್ ಇದನ್ನು ಬಂದ್ ಮಾಡಿರುವುದರಿಂದ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರಿದೆ. ಈ ಮಾರ್ಗವನ್ನು ತೆರೆಯದಿದ್ದರೆ ಜಾಗತಿಕ ಆರ್ಥಿಕತೆ ಕುಸಿಯುವ ಭೀತಿ ಇದೆ. ಟ್ರಂಪ್ ನೀಡಿರುವ ಈ 48 ಗಂಟೆಗಳ ಗಡುವು ಮುಗಿದ ನಂತರ ಅಮೆರಿಕ ಯಾವ ರೀತಿಯ ಭೀಕರ ದಾಳಿ ನಡೆಸಬಹುದು ಎಂಬ ಆತಂಕ ಇಡೀ ವಿಶ್ವವನ್ನು ಆವರಿಸಿದೆ.





