“ನಮ್ಮ ಬಳಿ ಅಸ್ತ್ರಗಳ ಭಂಡಾರವೇ ಇದೆ”: ಶತ್ರು ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!

Untitled design (35)

ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ಮತ್ತು ಇಸ್ರೇಲ್ ನಡುವೆ ನೇರ ಸಂಘರ್ಷ ಆರಂಭವಾಗಿದೆ. ಈ ಉದ್ವಿಗ್ನತೆಯ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶತ್ರು ರಾಷ್ಟ್ರಗಳಿಗೆ ಎದೆನಡುಗಿಸುವ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್ ಆರ್ಭಟ

ತಮ್ಮ ‘ಟೂತ್ ಸೋಶಿಯಲ್’ (Truth Social) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಟ್ರಂಪ್, ಅಮೆರಿಕದ ಮಿಲಿಟರಿ ಶಕ್ತಿಯನ್ನು ಜಗತ್ತಿನ ಮುಂದೆ ಪ್ರದರ್ಶಿಸಿದ್ದಾರೆ. ಅಮೆರಿಕದ ಯುದ್ಧಸಾಮಗ್ರಿ ಸಂಗ್ರಹವು ಹಿಂದೆಂದಿಗಿಂತಲೂ ಅತ್ಯುತ್ತಮ ಸ್ಥಿತಿಯಲ್ಲಿದೆ. ನಮ್ಮ ಬಳಿ ಇರುವ ಪೂರೈಕೆಯನ್ನು ಬಳಸಿಕೊಂಡು ನಾವು ಎಂದೆಂದಿಗೂ ಯುದ್ಧ ಮಾಡಬಲ್ಲೆವು ಎಂದು ಎಂದು ಹೇಳಿದೆ. ಈ ಮೂಲಕ ಅಮೆರಿಕವು ಮಧ್ಯಮ ಮತ್ತು ಉನ್ನತ-ಮಧ್ಯಮ ಶ್ರೇಣಿಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬೃಹತ್ ಭಂಡಾರವನ್ನು ಹೊಂದಿದೆ ಎಂದು ಶತೃ ರಾಷ್ಟ್ರಗಳಿಗೆ ಎಚ್ಚರಿಸಿದ್ದಾರೆ.

ಜೋ ಬೈಡನ್ ವಿರುದ್ಧ ವಾಗ್ದಾಳಿ

ಇದೇ ವೇಳೆ ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ವಿದೇಶಾಂಗ ನೀತಿಯನ್ನು ಟ್ರಂಪ್ ಕಟುವಾಗಿ ಟೀಕಿಸಿದ್ದು, ನಿದ್ದೆಗಣ್ಣಿನ (Sleepy) ಜೋ ಬೈಡನ್ ಅವರು ನಮ್ಮ ದೇಶದ ನೂರಾರು ಬಿಲಿಯನ್ ಡಾಲರ್ ಹಣವನ್ನು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಉಚಿತವಾಗಿ ನೀಡುವ ಮೂಲಕ ಅಮೆರಿಕದ ದಾಸ್ತಾನನ್ನು ಖಾಲಿ ಮಾಡಿದ್ದಾರೆ. ಶಸ್ತ್ರಾಸ್ತ್ರಗಳನ್ನು ನೀಡಿದರೂ ಅವುಗಳನ್ನು ಮರುಪೂರಣ (Replace) ಮಾಡುವ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ ಎಂದು ಕಿಡಿಕಾರಿದ್ದಾರೆ.

ತಮ್ಮ ಮೊದಲ ಅವಧಿಯಲ್ಲಿ ಅಮೆರಿಕದ ಮಿಲಿಟರಿಯನ್ನು ತಾವು ಹೇಗೆ ಪುನರ್ನಿರ್ಮಿಸಿದೆ ಎಂಬುದನ್ನು ಟ್ರಂಪ್ ನೆನಪಿಸಿಕೊಂಡಿದ್ದು, ಅದೃಷ್ಟವಶಾತ್, ನನ್ನ ಮೊದಲ ಅವಧಿಯಲ್ಲಿ ನಾನು ಮಿಲಿಟರಿಯನ್ನು ಸಜ್ಜುಗೊಳಿಸಿದ್ದೆ ಮತ್ತು ಈಗಲೂ ಅದನ್ನು ಬಲಪಡಿಸುವ ಕಾರ್ಯ ಮುಂದುವರಿಯುತ್ತಿದೆ. ಅಮೆರಿಕವು ಈಗ ಸಂಪೂರ್ಣ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಮತ್ತು ದೊಡ್ಡ ಮಟ್ಟದಲ್ಲಿ ಗೆಲ್ಲಲು ಸಿದ್ಧವಾಗಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅಮೆರಿಕದ ಒಳಗೆ ಮಾತ್ರವಲ್ಲದೆ, ತನ್ನ ಮಿತ್ರ ರಾಷ್ಟ್ರಗಳಲ್ಲೂ ಅಮೆರಿಕವು ಹೆಚ್ಚಿನ ಪ್ರಮಾಣದ ಸುಧಾರಿತ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದೆ ಎಂದು ಟ್ರಂಪ್ ಒಪ್ಪಿಕೊಂಡಿದ್ದಾರೆ. ಇದು ಇರಾನ್ ಅಥವಾ ಯಾವುದೇ ಶತ್ರು ರಾಷ್ಟ್ರಗಳು ಅಮೆರಿಕದ ಮೇಲೆ ದಾಳಿ ಮಾಡಲು ಯೋಚಿಸಿದರೆ ಅದಕ್ಕೆ ಭೀಕರವಾದ ತಿರುಗೇಟು ಸಿಗಲಿದೆ ಎಂಬ ನೇರ ಸಂದೇಶ ನೀಡಿದ್ದಾರೆ.

ಜಾಗತಿಕ ಪರಿಣಾಮ

ಟ್ರಂಪ್ ಅವರ ಈ ಹೇಳಿಕೆಯು ಮಿತ್ರ ರಾಷ್ಟ್ರಗಳಿಗೆ ಧೈರ್ಯ ನೀಡಿದ್ದರೆ, ಶತ್ರು ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕ ನೇರವಾಗಿ ಹಸ್ತಕ್ಷೇಪ ಮಾಡಲು ಸನ್ನದ್ಧವಾಗಿದೆ ಎಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.

Exit mobile version