ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಯುದ್ಧದ ಕುರಿತು ನಡೆಸಿದ ಪ್ರೈಮ್‌ಟೈಮ್ ಭಾಷಣವು ಜಾಗತಿಕ ಆರ್ಥಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಟ್ರಂಪ್ ಅವರ ಭಾಷಣ ಮುಗಿದ ಕೆಲವೇ ನಿಮಿಷಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿವೆ. ಯುದ್ಧವು ಇನ್ನು 2-3 ವಾರಗಳ ಕಾಲ ಮುಂದುವರಿಯಲಿದೆ ಎಂಬ ಅವರ ಹೇಳಿಕೆಯು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದು, ತೈಲ ದರದಲ್ಲಿ ದಿಢೀರ್ ಏರಿಕೆಗೆ ಕಾರಣವಾಗಿದೆ.
ಬೆಲೆ ಏರಿಕೆಯ ಅಂಕಿಅಂಶಗಳು
ಟ್ರಂಪ್ ಭಾಷಣಕ್ಕೂ ಮೊದಲು ಅಲ್ಪ ಇಳಿಕೆ ಕಂಡಿದ್ದ ತೈಲ ದರ, ಅವರ ಸಂದೇಶದ ನಂತರ ಮತ್ತೆ ಏರಿಕೆ ಕಂಡಿದೆ. ತೈಲ ರಫ್ತು ಮಾಡುವ ಒಪೆಕ್ (OPEC) ರಾಷ್ಟ್ರಗಳ ಬ್ರೆಂಟ್ (Brent) ಕಚ್ಚಾತೈಲದ ಬೆಲೆ ಶೇ. 4.5 ರಷ್ಟು ಏರಿಕೆಯಾಗಿ ಒಂದು ಬ್ಯಾರೆಲ್‌ಗೆ 106.42 ಡಾಲರ್ (ಅಂದಾಜು 9,930 ರೂ.) ತಲುಪಿದೆ. ಅದೇ ರೀತಿ, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ದರ ಶೇ. 4 ರಷ್ಟು ಏರಿಕೆಯಾಗಿ 104.24 ಡಾಲರ್ (ಅಂದಾಜು 9,732 ರೂ.) ನಲ್ಲಿ ವ್ಯವಹಾರ ನಡೆಸುತ್ತಿದೆ. ಬುಧವಾರವಷ್ಟೇ ತೈಲ ಬೆಲೆ 100 ಡಾಲರ್‌ಗಿಂತ ಕೆಳಗಿತ್ತು ಎಂಬುದು ಗಮನಾರ್ಹ.
ಇರಾನ್ ಮೇಲೆ ಟ್ರಂಪ್ ವಾಗ್ದಾಳಿ
ತಮ್ಮ ಭಾಷಣದಲ್ಲಿ ತೈಲ ಬೆಲೆ ಏರಿಕೆಗೆ ಇರಾನ್‌ನ ಭಯೋತ್ಪಾದನಾ ಚಟುವಟಿಕೆಗಳೇ ಕಾರಣ ಎಂದು ಟ್ರಂಪ್ ನೇರವಾಗಿ ದೂರಿದ್ದಾರೆ. ಇರಾನ್ ನಡೆಸುತ್ತಿರುವ ದಾಳಿಗಳು ವಾಣಿಜ್ಯ ತೈಲ ನೌಕೆಗಳ ಮೇಲೆ ಪರಿಣಾಮ ಬೀರುತ್ತಿವೆ. ಈ ಬೆಲೆ ಏರಿಕೆ ಕೇವಲ ತಾತ್ಕಾಲಿಕ. ಇನ್ನು ಎರಡು-ಮೂರು ವಾರಗಳಲ್ಲಿ ಯುದ್ಧ ಕೊನೆಗೊಳ್ಳಲಿದೆ, ಆನಂತರ ತೈಲ ಬೆಲೆಗಳು ಕಡಿಮೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವದ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಭದ್ರತೆಯ ಬಗ್ಗೆ ಮಾತನಾಡಿದ ಟ್ರಂಪ್, ನಮಗೆ ಅಲ್ಲಿಂದ ಬರುವ ತೈಲದ ಅಗತ್ಯವಿಲ್ಲ. ಅಮೆರಿಕವು ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದೆ. ನಾವು ಸೌದಿ ಅರೇಬಿಯಾ ಮತ್ತು ರಷ್ಯಾಕ್ಕಿಂತ ಹೆಚ್ಚಿನ ತೈಲ ಉತ್ಪಾದಿಸುತ್ತಿದ್ದೇವೆ. ತೈಲದ ಕೊರತೆ ಎದುರಿಸುತ್ತಿರುವ ದೇಶಗಳು ಅಮೆರಿಕದಿಂದಲೇ ನೇರವಾಗಿ ತೈಲ ಖರೀದಿಸಬಹುದು ಎಂದು ಮುಕ್ತ ಆಫರ್ ನೀಡಿದ್ದಾರೆ.
“ಶಿಲಾಯುಗಕ್ಕೆ ಕೊಂಡೊಯ್ಯುತ್ತೇವೆ”-ಕಠಿಣ ಎಚ್ಚರಿಕೆ
ಒಂದು ವೇಳೆ ಇರಾನ್ ಶಾಂತಿ ಮಾತುಕತೆಗೆ ಒಪ್ಪದಿದ್ದರೆ, ಮುಂದಿನ ವಾರಗಳಲ್ಲಿ ಅಲ್ಲಿನ ತೈಲ ಕೇಂದ್ರಗಳು ಮತ್ತು ವಿದ್ಯುತ್ ಘಟಕಗಳ ಮೇಲೆ ಭೀಕರ ದಾಳಿ ನಡೆಸಲಾಗುವುದು ಎಂದು ಟ್ರಂಪ್ ಗುಡುಗಿದ್ದಾರೆ. ನಾವು ಇರಾನ್ ಅನ್ನು ಶಿಲಾಯುಗಕ್ಕೆ ಕೊಂಡೊಯ್ಯುತ್ತೇವೆ ಎಂಬ ಅವರ ಮಾತುಗಳು ಯುದ್ಧದ ತೀವ್ರತೆ ಹೆಚ್ಚಾಗುವ ಸೂಚನೆ ನೀಡಿದೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾದರೆ ಅದು ಅಮೆರಿಕಕ್ಕೆ ಆರ್ಥಿಕವಾಗಿ ಲಾಭ ತರಲಿದೆ ಎಂಬ ವ್ಯಾಪಾರೀ ಲೆಕ್ಕಾಚಾರವನ್ನೂ ಅವರು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ತೈಲ ಬೆಲೆ ಏರಿಕೆಯು ಭಾರತದಂತಹ ಆಮದು ಅವಲಂಬಿತ ರಾಷ್ಟ್ರಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಭೀತಿ ಎದುರಾಗಿದೆ.





