ಬ್ರೇಕಪ್‌ ಆದ ಬೆನ್ನಲ್ಲೇ ಮಾಜಿ ಪ್ರೇಯಸಿ ತಿಂದ ಊಟಕ್ಕೂ ಹಣ ಕೇಳಿದ ಭೂಪ..!

Untitled design (79)

ಪ್ರೀತಿ ಎನ್ನುವುದು ನಿಸ್ವಾರ್ಥ ಭಾವನೆ ಎಂದು ನಾವೆಲ್ಲರೂ ನಂಬಿದ್ದೇವೆ. ಪ್ರೇಮಿಗಳು ಡೇಟಿಂಗ್ ಮಾಡುವಾಗ ಒಬ್ಬರಿಗೊಬ್ಬರು ಉಡುಗೊರೆ ನೀಡುವುದು, ಹೋಟೆಲ್‌ನಲ್ಲಿ ಖರ್ಚು ಮಾಡುವುದು ಬಹಳ ಸಾಮಾನ್ಯ. ಆದರೆ ಚೀನಾದಲ್ಲಿ ನಡೆದ ಈ ಘಟನೆ ಮಾತ್ರ ಪ್ರೀತಿಯ ವ್ಯಾಖ್ಯಾನವನ್ನೇ ಬದಲಿಸುವಂತಿದೆ. ತನ್ನ ಮಾಜಿ ಪ್ರೇಯಸಿ ತನಗಿಂತ ಹೆಚ್ಚು ಆಹಾರ ಸೇವಿಸಿದ್ದಾಳೆ ಎಂದು ದೂರಿದ ವ್ಯಕ್ತಿಯೊಬ್ಬ, ಆಕೆಗಾಗಿ ಮಾಡಿದ ಖರ್ಚು ಮಾಡಿದ ಹಣವನ್ನ ಮರಳಿ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.

ಘಟನೆಯ ಹಿನ್ನೆಲೆ

ಚೀನಾದ ಹೈಲಾಂಗ್‌ಜಿಯಾಂಗ್ ಪ್ರಾಂತ್ಯದ ‘ಹೇ’ ಎಂಬ ಯುವಕ ಮತ್ತು ‘ವಾಂಗ್’ ಎಂಬ ಯುವತಿ ದೀರ್ಘಕಾಲದಿಂದ ಪ್ರೀತಿಸುತ್ತಿದ್ದರು. ಇಬ್ಬರೂ ವಿವಾಹವಾಗಲು ನಿರ್ಧರಿಸಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಚೀನಾದ ಸಂಪ್ರದಾಯದಂತೆ ಮದುವೆ ನಿಶ್ಚಯವಾದಾಗ ವರನ ಕುಟುಂಬವು ವಧುವಿನ ಕುಟುಂಬಕ್ಕೆ ‘ಬ್ರಿಡ್ ಪ್ರೈಸ್’ (ಒಂದು ರೀತಿಯ ವರದಕ್ಷಿಣೆ ಮಾದರಿಯ ಹಣ) ನೀಡುತ್ತದೆ. ಅದರಂತೆ ‘ಹೇ’ ಕುಟುಂಬವು ಸುಮಾರು 2.40 ಲಕ್ಷ ರೂಪಾಯಿಗಳನ್ನು ವಾಂಗ್ ಕುಟುಂಬಕ್ಕೆ ನೀಡಿತ್ತು. ಆದರೆ ಕಾರಣಾಂತರಗಳಿಂದ ಇವರ ನಿಶ್ಚಿತಾರ್ಥ ಮುರಿದು ಬಿದ್ದಿತು.

ಒಳ ಉಡುಪಿನ ಹಣಕ್ಕೂ ಬೇಡಿಕೆ ಇಟ್ಟ ಪ್ರಿಯತಮ

ನಿಶ್ಚಿತಾರ್ಥ ಮುರಿದ ಬೆನ್ನಲ್ಲೇ ‘ಹೇ’ ತನ್ನ ಅಸಲಿ ರೂಪ ತೋರಿಸಲು ಶುರುಮಾಡಿದ. ನ್ಯಾಯಾಲಯಕ್ಕೆ ಹೋದ ಈತ, ಕೇವಲ ಬ್ರಿಡ್ ಪ್ರೈಸ್ ಹಣ ಮಾತ್ರವಲ್ಲದೆ, ಡೇಟಿಂಗ್ ಸಮಯದಲ್ಲಿ ಆಕೆಗಾಗಿ ಖರ್ಚು ಮಾಡಿದ್ದ ಸುಮಾರು 3.50 ಲಕ್ಷ ರೂಪಾಯಿಗಳನ್ನು ಪೈಸೆ ಪೈಸೆ ಬಿಡದೆ ವಾಪಸ್ ನೀಡಬೇಕು ಎಂದು ಹಠ ಹಿಡಿದಿದ್ದಾನೆ. ಅಚ್ಚರಿಯೆಂದರೆ, ಈತ ತಾನು ಆಕೆಗೆ ಕೊಡಿಸಿದ್ದ ಕಪ್ಪು ಬಣ್ಣದ ಟೈಟ್ಸ್ ಮತ್ತು ಒಳ ಉಡುಪುಗಳ ಬಿಲ್‌ಗಳನ್ನ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ.

ಇದರಿಂದ ಕೆರಳಿದ ಯುವತಿ ವಾಂಗ್, ನಾನು ಆ ಉಡುಪುಗಳನ್ನು ಧರಿಸಿದಾಗ ನೀನು ಆನಂದಿಸಿರಲಿಲ್ಲವೇ ? ನೀನು ಮನುಷ್ಯನೋ ಅಥವಾ ಕ್ಯಾಲ್ಕುಲೇಟರ್ ಯಂತ್ರವೋ ? ಎಂದು ತುಂಬಿದ ನ್ಯಾಯಾಲಯದಲ್ಲೇ ಕಿಡಿಕಾರಿದ್ದಾಳೆ. ಅಷ್ಟೇ ಅಲ್ಲದೆ, ಈತ ಆಕೆ ತನಗಿಂತ ಜಾಸ್ತಿ ಊಟ ಮಾಡುತ್ತಿದ್ದಳು ಎಂದು ದೂರಿರುವುದು ನೆಟ್ಟಿಗರನ್ನು ಕೆರಳಿಸಿದೆ.

ಈ ವಿಚಿತ್ರ ಪ್ರಕರಣದ ವಿಚಾರಣೆ ನಡೆಸಿದ ಚೀನಾದ ನ್ಯಾಯಾಲಯವು ಮಾನವೀಯತೆ ಮತ್ತು ಕಾನೂನಿನ ಆಧಾರದ ಮೇಲೆ ತೀರ್ಪು ನೀಡಿದೆ. ಡೇಟಿಂಗ್ ಅವಧಿಯಲ್ಲಿ ಪ್ರೀತಿಯಿಂದ ನೀಡಿದ ಉಡುಗೊರೆಗಳು ಅಥವಾ ಸ್ವಯಂಪ್ರೇರಿತವಾಗಿ ಮಾಡಿದ ಖರ್ಚುಗಳನ್ನು ಒಪ್ಪಂದವೆಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಅದನ್ನು ಮರಳಿ ಪಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ಆದರೆ, ಮದುವೆಯ ಉದ್ದೇಶಕ್ಕಾಗಿ ನೀಡಲಾಗಿದ್ದ ‘ಬ್ರಿಡ್ ಪ್ರೈಸ್’ ಎಂಬುದು ಸಾಮಾಜಿಕ ಪದ್ಧತಿಯ ಭಾಗವಾಗಿರುವುದರಿಂದ, ಆ ಮೊತ್ತದಲ್ಲಿ ಅರ್ಧದಷ್ಟು ಹಣವನ್ನು (ಸುಮಾರು 1.20 ಲಕ್ಷ ರೂ.) ಮಾತ್ರ ಮರಳಿ ನೀಡುವಂತೆ ಯುವತಿಗೆ ಆದೇಶಿಸಿತು. ಉಳಿದ 3.50 ಲಕ್ಷ ರೂಪಾಯಿ ಖರ್ಚಿನ ಬೇಡಿಕೆಯನ್ನು ನ್ಯಾಯಾಲಯ ತಳ್ಳಿಹಾಕಿದೆ.

Exit mobile version