“ನಾನು ಜೀವಂತವಾಗಿದ್ದೇನೆ”: ವದಂತಿಗಳಿಗೆ ವಿಡಿಯೋ ಮೂಲಕ ಫುಲ್ ಸ್ಟಾಪ್ ಇಟ್ಟ ನೆತನ್ಯಾಹು

Untitled design 2026 03 18T105111.706

ನವದೆಹಲಿ, ಮಾರ್ಚ್ 18: ಇಸ್ರೇಲ್ (Israel) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಇರಾನ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ ಈಗ ಆ ವದಂತಿಗಳಿಗೆ ತೆರೆ ಬಿದ್ದಿದೆ. ನೆತನ್ಯಾಹು ಅವರು ಅಮೆರಿಕದ ರಾಯಭಾರಿ ಮೈಕ್ ಹಕಬೀ ಅವರೊಂದಿಗೆ ಮಾತನಾಡುತ್ತಿರುವ ಹೊಸ ವಿಡಿಯೋವೊಂದು ಬಿಡುಗಡೆಯಾಗಿದ್ದು, ಅದರ ಮೂಲಕ ಅವರು ಜೀವಂತವಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಇರಾನ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದ ಸಮಯದಲ್ಲಿ ನೆತನ್ಯಾಹು ಸಾವನ್ನಪ್ಪಿದ್ದರು ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದವು. ಗುರುವಾರ ದೂರದರ್ಶನದಲ್ಲಿ ನೆತನ್ಯಾಹು ದೇಶವನ್ನು ಉದ್ದೇಶಿಸಿ ಮಾತನಾಡಿದ ವಿಡಿಯೋವೊಂದನ್ನು ಆಧರಿಸಿ ಈ ವದಂತಿ ಹುಟ್ಟಿಕೊಂಡಿತ್ತು. ಇರಾನ್ ನಡೆಸಿದ ದಾಳಿಗೆ ನೆತನ್ಯಾಹು ಮೃತಪಟ್ಟಿದ್ದಾರೆ, ಇದು AI ವಿಡಿಯೋ ಆಗಿದ್ದು, ಅವರ ಬಲಗೈಯಲ್ಲಿ 6 ಬೆರಳುಗಳಿವೆ ಎಂಬ ಹೆಡ್ಲೈನ್ಗಳೊಂದಿಗೆ ವಿಡಿಯೋಗಳು ವೈರಲ್ ಆಗಿದ್ದವು. ಮೃತಪಟ್ಟರೂ AI ವಿಡಿಯೋ ಮಾಡುವ ಮೂಲಕ ಬದುಕಿದ್ದೇನೆ ಎಂದು ಜನತೆಗೆ ಸುಳ್ಳು ಹೇಳುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದ್ದವು.

ಹೊಸ ವಿಡಿಯೋದಲ್ಲಿ ನೆತನ್ಯಾಹು ಪ್ರತ್ಯಕ್ಷ

ದಾರಿತಪ್ಪಿಸುವ ಪೋಸ್ಟ್‌ಗಳು ವೈರಲ್ ಆದ ನಂತರ ಈ ಹೊಸ ಕ್ಲಿಪ್ ಬಿಡುಗಡೆಯಾಗಿದೆ. ಮಂಗಳವಾರ (ಮಾರ್ಚ್ 18) ಬಿಡುಗಡೆಯಾದ ಇತ್ತೀಚಿನ ವೀಡಿಯೊದಲ್ಲಿ ನೆತನ್ಯಾಹು, ಹಕಬೀ ಅವರೊಂದಿಗೆ ನಡೆದುಕೊಂಡು ಮಾತನಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸ್ಪಷ್ಟವಾಗಿದ್ದು, ನೆತನ್ಯಾಹು ಸಂಪೂರ್ಣ ಆರೋಗ್ಯವಂತರಾಗಿ ಕಾಣಿಸಿಕೊಂಡಿದ್ದಾರೆ. ಅಮೆರಿಕದ ರಾಯಭಾರಿಯೊಂದಿಗೆ ಅವರು ಗಂಭೀರ ವಿಷಯಗಳ ಬಗ್ಗೆ ಚರ್ಚಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇರಾನ್ ಜನರಿಗೆ ನೌರುಜ್ ಶುಭಾಶಯ

ಇನ್ನು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಇತ್ತೀಚಿನ ವಾರಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಬೆಂಜಮಿನ್ ನೆತನ್ಯಾಹು ಮೃತಪಟ್ಟಿದ್ದಾರೆ ಎಂಬ ವದಂತಿಗಳು ಹರಡುತ್ತಿರುವುದರ ಮಧ್ಯೆ ಇಸ್ರೇಲ್ ಪ್ರಧಾನಮಂತ್ರಿ ಇರಾನ್ ಜನರಿಗೆ ನೌರುಜ್ ಹಬ್ಬದ (Nowruz Festival) ಶುಭಾಶಯಗಳನ್ನು ತಿಳಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ.

“ಧೈರ್ಯಶಾಲಿ ಇರಾನ್ ಜನತೆಗೆ, ಬೆಳಕಿನ ಹಬ್ಬದಿಂದ ಆರಂಭವಾಗುವ ಹಬ್ಬದ ಋತುವಿಗೆ ಹಾರ್ದಿಕ ಶುಭಾಶಯಗಳು. ಇದು ಬೆಳಕು ಕತ್ತಲೆಯ ಮೇಲೆ ಜಯ ಸಾಧಿಸುತ್ತದೆ, ಒಳ್ಳೆಯದು ಕೆಟ್ಟದ ಮೇಲೆ ಜಯ ಸಾಧಿಸುತ್ತದೆ ಎಂಬ ಇರಾನ್ ಜನರ ಶಾಶ್ವತ ನಂಬಿಕೆಯನ್ನು ಸೂಚಿಸುತ್ತದೆ” ಎಂದು ನೆತನ್ಯಾಹು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ನೌರುಜ್ ಪಾರ್ಸಿ ಹೊಸ ವರ್ಷವನ್ನು ಹಾಗೂ ಇರಾನ್ ಕ್ಯಾಲೆಂಡರ್ನ ಆರಂಭವನ್ನು ಸೂಚಿಸುತ್ತದೆ. ಇದು ವಸಂತ ಋತುವಿನ ಆಗಮನವನ್ನೂ ಸೂಚಿಸಿ, ಇರಾನ್, ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಹಲವು ಭಾಗಗಳಲ್ಲಿ ಲಕ್ಷಾಂತರ ಜನರು ಆಚರಿಸುತ್ತಾರೆ.

ನೆತನ್ಯಾಹು ಅವರ ಹೊಸ ವಿಡಿಯೋ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಯಾಗಿದೆ. AI ವಿಡಿಯೋ ಆರೋಪಗಳನ್ನು ತಳ್ಳಿಹಾಕಿರುವ ನೆತನ್ಯಾಹು ಬೆಂಬಲಿಗರು ಈ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. 

Exit mobile version