ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಾಟಲ್ ತಾಲೂಕಿನ ರತ್ನೇಶ್ವರಬತಿ ಗ್ರಾಮದಲ್ಲಿ ನಡೆದ ವಿಚಿತ್ರ ಘಟನೆ ಎಲ್ಲರನ್ನೂ ಆಘಾತಕ್ಕೆ ಒಳಪಡಿಸಿದೆ. ಬೆಳ್ಳಿ ಆಭರಣ ತಯಾರಿಕೆ ವ್ಯವಹಾರ ಮಾಡುತ್ತಿರುವ ಸಂಧು ಎಂಬ ವ್ಯಕ್ತಿಯ ಮನೆಯಲ್ಲಿ ನವೆಂಬರ್ 23ರಂದು ನಡೆದ ಈ ದುರಂತದಲ್ಲಿ ಕುಟುಂಬದ 6 ಜನರು ಆಮ್ಲ (ಆ್ಯಸಿಡ್) ಮಿಶ್ರಿತ ಆಹಾರ ಸೇವಿಸಿ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ.
ಮನೆಯ ಮಹಿಳೆ ಅಡುಗೆ ಮಾಡುವಾಗ ನೀರು ಎಂದು ಭಾವಿಸಿ ಬೆಳ್ಳಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇಟ್ಟಿದ್ದ ಆ್ಯಸಿಡ್ ಅನ್ನೇ ಬಳಸಿಕೊಂಡಿದ್ದಾರೆ. ಆ್ಯಸಿಡ್ ಅನ್ನು ಸಾಮಾನ್ಯ ನೀರಿನ ಪಾತ್ರೆಯಲ್ಲೇ ಇಡಲಾಗಿತ್ತು. ಇದನ್ನು ಗಮನಿಸದೇ ಮಹಿಳೆ ಆ ಪಾತ್ರೆಯಲ್ಲಿದ್ದ ಆ್ಯಸಿಡ್ ಅನ್ನು ನೀರು ಎಂದು ತಿಳಿದು ಅಡುಗೆಗೆ ಬಳಸಿದ್ದಾರೆ. ಆ ಊಟವನ್ನು ಮನೆಯಲ್ಲಿದ್ದ 6 ಜನರು – ಮೂವರು ವಯಸ್ಕರು ಮತ್ತು ಮೂವರು ಮಕ್ಕಳು ಸೇವಿಸಿದ್ದಾರೆ.
ಊಟ ಮಾಡಿದ ಕೆಲವೇ ನಿಮಿಷಗಳಲ್ಲಿ ಎಲ್ಲರಿಗೂ ತೀವ್ರ ಹೊಟ್ಟೆ ನೋವು, ವಾಂತಿ, ತಲೆಸುತ್ತು, ಉಸಿರಾಟದ ತೊಂದರೆ ಶುರುವಾಯಿತು. ತಕ್ಷಣ ಸ್ಥಳೀಯರು ಎಚ್ಚೆತ್ತುಕೊಂಡು ಎಲ್ಲರನ್ನೂ ಘಾಟಲ್‌ನ ಕಡಲ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಸ್ಥಿತಿ ಗಂಭೀರವೆಂದು ತಿಳಿದು ಎಲ್ಲ 6 ಜನರನ್ನೂ ಕೊಲ್ಕತ್ತಾದ ಪ್ರತಿಷ್ಠಿತ ಎಸ್‌ಎಸ್‌ಕೆಎಂ (SSKM) ಆಸ್ಪತ್ರೆಗೆ ಸ್ಥಳಾಂತರಿಸಿದರು.
ಪ್ರಸ್ತುತ ಎಲ್ಲರೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಮ್ಲ ಸೇವನೆಯಿಂದ ಆಹಾರ ನಾಳ, ಹೊಟ್ಟೆ ಮತ್ತು ಗಂಟಲಿನಲ್ಲಿ ತೀವ್ರ ಸುಟು ಉಂಟಾಗಿದ್ದು, ದೀರ್ಘಕಾಲಿಕ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ಘಟನೆಯ ಬಗ್ಗೆ ತಿಳಿದು ಘಾಟಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮನೆಯಲ್ಲಿ ಬೆಳ್ಳಿ ಆಭರಣ ತಯಾರಿಕೆಗೆ ಬಳಸುವ ಆ್ಯಸಿಡ್ ಅನ್ನು ಸುರಕ್ಷಿತವಾಗಿ ಇಡದೇ ನೀರಿನ ಪಾತ್ರೆಯಲ್ಲಿಟ್ಟಿದ್ದುದೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. “ಇದೊಂದು ಆಕಸ್ಮಿಕ ಘಟನೆ. ಯಾರ ಮೇಲೂ ಆರೋಪವಿಲ್ಲ, ಆದರೆ ಮನೆಯಲ್ಲಿ ರಾಸಾಯನಿಕಗಳನ್ನು ಸುರಕ್ಷಿತವಾಗಿ ಇಡುವ ಬಗ್ಗೆ ಜಾಗೃತಿ ಮೂಡಿಸಬೇಕು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ಮನೆಯಲ್ಲಿ ರಾಸಾಯನಿಕಗಳು, ಆಮ್ಲಗಳನ್ನು ಮಕ್ಕಳು ಮತ್ತು ಅಡುಗೆ ಸಾಮಗ್ರಿಗಳಿಂದ ದೂರವಿಡುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗುತ್ತಿದೆ.





