ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದ ಈ ಸಮಯದಲ್ಲಿ, ಆಸ್ಟ್ರೇಲಿಯಾದ ಕ್ರಿಕೆಟ್ ಪ್ರಪಂಚವನ್ನು ದುಃಖದ ಅಲೆ ಆವರಿಸಿದೆ. ದೇಶದ 17 ವರ್ಷದ ಯುವ ಪ್ರತಿಭೆ ಬೆನ್ ಆಸ್ಟಿನ್ ಅಭ್ಯಾಸ ಮಾಡುತ್ತಿದ್ದಾಗ ತಲೆಗೆ ಚೆಂಡು ಬಡಿದು ಮೃತಪಟ್ಟಿದ್ದಾರೆ.
ಈ ದುಃಖದ ಘಟನೆ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ವಾಲಿ ಟೂ ರಿಸರ್ವ್ ಮೈದಾನದಲ್ಲಿ ನಡೆದಿದೆ. ಬೆನ್ ಆಸ್ಟಿನ್ ಫರ್ನ್ ಗಲ್ಲಿ ಕ್ರಿಕೆಟ್ ಕ್ಲಬ್ ತರಪೇತಿ ನೀಡುತ್ತಿದ್ದ ನೆಟ್ಸ್ ಅಭ್ಯಾಸದಲ್ಲಿ ಭಾಗವಹಿಸಿದ್ದರು. ಅಭ್ಯಾಸದ ವೇಳೆ, ಒಂದು ಚೆಂಡು ನೇರವಾಗಿ ಅವರ ತಲೆಗೆ ಬಡಿದು ಗಂಭೀರ ಗಾಯವಾಗಿತ್ತು. ಘಟನೆಯ ನಂತರ, ತಕ್ಷಣ ಅಲ್ಲಿದ್ದ ಆಟಗಾರರು ಮತ್ತು ಕೋಚ್‌ಗಳು ಬೆನ್‌ಗೆ ಪ್ರಥಮ ಚಿಕಿತ್ಸೆ ನೀಡಿದರು. ಪೊಲೀಸರು ಮತ್ತು ಆಂಬ್ಯುಲೆನ್ಸ್ ಸೇವೆಗಳು ತ್ವರಿತಗತಿಯಲ್ಲಿ ಮೈದಾನಕ್ಕೆ ತಲುಪಿದವು.
ಗಂಭೀರ ಸ್ಥಿತಿಯಲ್ಲಿರುವ ಬೆನ್ ಅವರನ್ನು ತುರ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಲೈಫ್ ಸಪೋರ್ಟ್ ಸಿಸ್ಟಮ್‌ನಲ್ಲಿ ಇರಿಸಿ, ಸಾಧ್ಯವಿರುವ ಎಲ್ಲಾ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಾಯಿತು. ರಿಂಗ್‌ವುಡ್ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮೈಕೆಲ್ ಫಿನ್ ಅವರು ಚಿಕಿತ್ಸೆಗಾಗಿ ಎಲ್ಲಾ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ದುರದೃಷ್ಟವಶಾತ್, ಬೆನ್ ಆಸ್ಟಿನ್ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಆಸ್ಪತ್ರೆಯಲ್ಲಿ ಅವರು ಅಸು ನೀಗಿದರು.
ಈ ದುಃಖದ ಸುದ್ದಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ (CA) ಅಧಿಕೃತವಾಗಿ ಖಚಿತಪಡಿಸಿದೆ. CA ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಶೋಕ ಸಂದೇಶವನ್ನು ಹಂಚಿಕೊಂಡು, ಬ್ಯಾಟಿಂಗ್ ಮಾಡುವಾಗ ಅಪಘಾತದಲ್ಲಿ ಸಾವನ್ನಪ್ಪಿದ 17 ವರ್ಷದ ಬೆನ್ ಆಸ್ಟಿನ್ ಅವರ ದುರಂತ ಸಾವಿನಿಂದ ಕ್ರಿಕೆಟ್ ಆಸ್ಟ್ರೇಲಿಯಾ ಆಘಾತಕ್ಕೊಳಗಾಗಿದೆ ಎಂದು ತಿಳಿಸಿದೆ.
