ಢಾಕಾ: ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯ ನಡುವೆ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಉದ್ದೇಶಪೂರ್ವಕ ದಾಳಿಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ದೀಪು ಚಂದ್ರ ದಾಸ್, ಅಮೃತ್ ಮಂಡಲ್ ಸೇರಿದಂತೆ ಹಲವು ಹಿಂದೂಗಳ ಸರಣಿ ಹತ್ಯೆಗಳ ಬೆನ್ನಲ್ಲೇ, ಇದೀಗ ಪತ್ರಕರ್ತ ಹಾಗೂ ಕಾರ್ಖಾನೆ ಮಾಲೀಕ ರಾಣ ಪ್ರತಾಪ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಘಟನೆಯ ಹಿನ್ನೆಲೆ
ಸೋಮವಾರ (ಜ. 5) ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ನೈಋತ್ಯ ಬಾಂಗ್ಲಾದೇಶದ ಜಶೋರ್ ಜಿಲ್ಲೆಯ ಮಣಿರಾಂಪುರ ಉಪ ಜಿಲ್ಲೆಯ ಕೊಪಾಲಿಯಾ ಬಜಾರ್‌ನಲ್ಲಿ ಈ ಘಟನೆ ನಡೆದಿದೆ. ಮೃತ ರಾಣ ಪ್ರತಾಪ್ ಅವರು ಕೇಶಬ್‌ಪುರ ಉಪ ಜಿಲ್ಲೆಯ ಅರುವಾ ಗ್ರಾಮದ ಶಾಲಾ ಶಿಕ್ಷಕರೊಬ್ಬರ ಪುತ್ರರಾಗಿದ್ದಾರೆ. ಇವರು ಕಳೆದ ಎರಡು ವರ್ಷಗಳಿಂದ ಕೊಪಾಲಿಯಾ ಬಜಾರ್‌ನಲ್ಲಿ ಐಸ್ ಕಾರ್ಖಾನೆಯೊಂದನ್ನು ನಡೆಸುತ್ತಿದ್ದರು. ಇದರೊಂದಿಗೆ ನರೈಲ್ ಜಿಲ್ಲೆಯಿಂದ ಪ್ರಕಟವಾಗುವ ‘ಬಿ.ಡಿ. ಖೋಬೋರ್’ ಎಂಬ ದಿನಪತ್ರಿಕೆಯ ಹಂಗಾಮಿ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸೋಮವಾರ ಸಂಜೆ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳ ಗುಂಪು ರಾಣ ಪ್ರತಾಪ್ ಅವರನ್ನು ಐಸ್ ಕಾರ್ಖಾನೆಯಿಂದ ಹೊರಗೆ ಕರೆತಂದಿದ್ದಾರೆ. ಅಲ್ಲಿ ಅವರೊಂದಿಗೆ ಕೆಲ ಕಾಲ ವಾಗ್ವಾದ ನಡೆಸಿದ ದುಷ್ಕರ್ಮಿಗಳು, ಏಕಾಏಕಿ ಅವರ ತಲೆಗೆ ಗುರಿ ಇಟ್ಟು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಪ್ರತಾಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು ಸುಮಾರು 7 ಖಾಲಿ ಗುಂಡುಗಳನ್ನು ಪತ್ತೆ ಹಚ್ಚಿದ್ದಾರೆ.
ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಹಿಂದೂ ನಾಯಕರು, ಉದ್ಯಮಿಗಳು ಮತ್ತು ಪತ್ರಕರ್ತರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ರಾಣ ಪ್ರತಾಪ್ ಅವರ ಮೇಲೆ ಈ ಹಿಂದೆ ಕೆಲವು ಪ್ರಕರಣಗಳು ದಾಖಲಾಗಿದ್ದವು ಎಂಬ ಮಾಹಿತಿ ಇದ್ದರೂ, ಅವರ ಹತ್ಯೆಯ ಹಿಂದೆ ಕೋಮು ದ್ವೇಷ ಅಥವಾ ರಾಜಕೀಯ ಪ್ರೇರಿತ ಸಂಚು ಇರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸ್ಥಳೀಯ ಹಿಂದೂ ಸಮುದಾಯದಲ್ಲಿ ತೀವ್ರ ಭಯವನ್ನು ಉಂಟುಮಾಡಿದೆ. ಸರ್ಕಾರವು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂಬ ಆಕ್ರೋಶಗಳು ಕೇಳಿಬರುತ್ತಿವೆ.
