ಬಾಂಗ್ಲಾದೇಶ ನೋಟುಗಳಲ್ಲಿ ಬದಲಾವಣೆ: ಮುಜಿಬ್ ಚಿತ್ರದ ಬದಲಿಗೆ ಹಿಂದೂ ದೇಗುಲಗಳ ಚಿತ್ರ

Untitled design 2025 06 02t202357.182

ಢಾಕಾ: ಬಾಂಗ್ಲಾದೇಶದ ಕರೆನ್ಸಿ ನೋಟುಗಳಲ್ಲಿ ದೊಡ್ಡ ಬದಲಾವಣೆಯೊಂದು ಜಾರಿಗೆ ಬಂದಿದೆ. ಇದುವರೆಗೆ ದೇಶದ ನೋಟುಗಳಲ್ಲಿ ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಚಿತ್ರವಿತ್ತು. ಆದರೆ, ಇದೀಗ ಹೊಸದಾಗಿ ಬಿಡುಗಡೆಯಾದ ಕರೆನ್ಸಿ ನೋಟುಗಳಿಂದ ಶೇಖ್ ಮುಜಿಬುರ್ ಚಿತ್ರವನ್ನು ತೆಗೆದು, ಅದರ ಬದಲಿಗೆ ಹಿಂದೂ ಮತ್ತು ಬೌದ್ಧ ದೇವಾಲಯಗಳ ಚಿತ್ರಗಳನ್ನು ಸೇರಿಸಲಾಗಿದೆ.

ಜೂನ್ 1, 2025ರಂದು ಬಾಂಗ್ಲಾದೇಶ ಬ್ಯಾಂಕ್ ಹೊಸ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಿದೆ. ಈ ನೋಟುಗಳಲ್ಲಿ ಶೇಖ್ ಮುಜಿಬುರ್ ರೆಹಮಾನ್ ಚಿತ್ರವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಐತಿಹಾಸಿಕ ನಿರ್ಧಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ದೇಶದಿಂದ ಪಲಾಯನದ ಬೆನ್ನಲ್ಲೇ, ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದಿಂದ ತೆಗೆದುಕೊಳ್ಳಲ್ಪಟ್ಟಿದೆ. ಶೇಖ್ ಹಸೀನಾ ಅವರ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಭುಗಿಲೇದ್ದ ಹಿಂಸಾಚಾರದಿಂದಾಗಿ ಈ ಬದಲಾವಣೆಯಾಯಿತು.

ಬಾಂಗ್ಲಾದೇಶ ಬ್ಯಾಂಕ್‌ನ ವಕ್ತಾರ ಆರಿಫ್ ಹುಸೇನ್ ಖಾನ್ ಹೇಳಿರುವಂತೆ, “ಹೊಸ ನೋಟುಗಳ ಸರಣಿಯಲ್ಲಿ ಯಾವುದೇ ವ್ಯಕ್ತಿಗಳ ಚಿತ್ರಗಳನ್ನು ಒಳಗೊಂಡಿರುವುದಿಲ್ಲ. ಬದಲಿಗೆ, ದೇಶದ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಪರಂಪರೆ, ಮತ್ತು ಐತಿಹಾಸಿಕ ಹೆಗ್ಗುರುತುಗಳನ್ನು ಮಾತ್ರ ಒಳಗೊಂಡಿರುತ್ತವೆ.” ಹೊಸ ನೋಟುಗಳಲ್ಲಿ 1971ರ ವಿಮೋಚನಾ ಯುದ್ಧದಲ್ಲಿ ಹುತಾತ್ಮರಾದವರಿಗೆ ಗೌರವವಾಗಿ ಸ್ಮಾರಕ ಚಿತ್ರಗಳು, ದಿವಂಗತ ಕಲಾವಿದ ಜೈನುಲ್ ಅಬೇದಿನ್ ಅವರ ಕಲಾಕೃತಿಗಳು, ಹಾಗೂ ಹಿಂದೂ ಮತ್ತು ಬೌದ್ಧ ದೇವಾಲಯಗಳ ಚಿತ್ರಗಳನ್ನು ಸೇರಿಸಲಾಗಿದೆ.

1972ರಲ್ಲಿ, ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದ ನಂತರ, ಬಾಂಗ್ಲಾದೇಶವು ತನ್ನದೇ ಆದ ಕರೆನ್ಸಿಯನ್ನು ಪರಿಚಯಿಸಿತ್ತು. ಆರಂಭದಲ್ಲಿ ಈ ನೋಟುಗಳಲ್ಲಿ ದೇಶದ ನಕ್ಷೆಯನ್ನು ಮಾತ್ರ ಒಳಗೊಂಡಿತ್ತು. ನಂತರ, ಅವಾಮಿ ಲೀಗ್‌ನ ನಾಯಕ ಶೇಖ್ ಮುಜಿಬುರ್ ರೆಹಮಾನ್ ಚಿತ್ರವನ್ನು ಸೇರಿಸಲಾಯಿತು. ಆದರೆ, ಇದೀಗ ಈ ಚಿತ್ರವನ್ನು ತೆಗೆದುಹಾಕಿ, ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಹೇಳುವ ಚಿತ್ರಗಳನ್ನು ಸೇರಿಸಲಾಗಿದೆ.

Exit mobile version